ನವದೆಹಲಿ: ರಾಜಕೀಯ ರಂಗದ ಧೀಮಂತ, ಅಜಾತ ಶತ್ರು ಎಂದೇ ಕರೆಯಿಸಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ.
ಬಿಜೆಪಿಯಿಂದ ಪ್ರಧಾನಿಯಾಗಿ ಮೊದಲ ಬಾರಿಗೆ ಪೂರ್ಣಾವಧಿ ಅಧಿಕಾರ ಪೂರ್ತಿಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಾತಿನ ಮಲ್ಲ, ಚಾಣಕ್ಷ್ಯ ರಾಜಕಾರಣಿ ಅನಾರೋಗ್ಯದ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಆರೋಗ್ಯ ಸ್ಥಿತಿ ಕಳೆದೆರಡು ದಿನದಿಂದ ತೀವ್ರ ಬಿಗಡಾಯಿಸಿತ್ತು. ಅವರು ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಜಕೀಯ ಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡಿತ್ತು.
ಇಂದೂ ಕೂಡಾ ಬೆಳಿಗ್ಗೆಯಿಂದಲೇ ಪಕ್ಷ ಬೇಧ ಮರೆತು ರಾಜಕೀಯ ಗಣ್ಯರು ವಾಜಪೇಯಿ ಭೇಟಿಗೆ ಆಗಮಿಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್, ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಬಿಜೆಪಿಯೇತರ ನಾಯಕರೂ ಹಿರಿಯ ನಾಯಕನ ಭೇಟಿಗೆ ಆಗಮಿಸಿದ್ದರು. ಇನ್ನು, ದೇಶದಾದ್ಯಂತ ಅಭಿಮಾನಿಗಳು ಅವರು ಗುಣಮುಖರಾಗಲಿ ಎಂದು ಹೋಮ ಹವನ ನಡೆಸಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಗೊಡಲಿಲ್ಲ. ಮೆಚ್ಚಿನ ಪ್ರಧಾನಿಯಾಗಿದ್ದ ಅಟಲ್ ಇಹಲೋಕ ತ್ಯಜಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.