ನವದೆಹಲಿ : ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿ ಜನರ ಆಕ್ರೋಶ ಕಾರಣರಾಗಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ 'ಭಾರತ ರತ್ನ' ವಾಜಪೇಯಿ ಅವರನ್ನು ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ 24 ಗಂಟೆಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಅವರಿಗೆ ಜೀವ ರಕ್ಷಕಗಳ ನೆರವು ಒದಗಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಅವರು ಭಾರತದ ಮಾಜಿ ಪ್ರಧಾನಿ, ಅತ್ಯುತ್ತಮ ವಾಗ್ಮಿ, ಭಾರತದ ರಾಜಕೀಯದ ಧ್ರುವತಾರೆ... ಅಟಲ್ ಬಿಹಾರಿ ವಾಜಪೇಯಿ ಇಲ್ಲಿಲ್ಲ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.
ನಂತರ ಆ ಟ್ವೀಟ್ ಅನ್ನು ಅವರು ಡಿಲೀಟ್ ಮಾಡಿದ್ದಾರಾದರೂ, ಅವರು ಮಾಡಿದ್ದ ಟ್ವೀಟ್ ಅನ್ನು ಹಲವರು ಸ್ಕ್ರೀನ್ ಶಾಟ್ ತೆಗೆದುಕೊಂಡು, 'ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಯಾಕೆ ಇಂಥ ಬೇಜವಾಬ್ದಾರಿ ವರ್ತನೆ ತೋರುತ್ತಾರೆ' ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತಥಾಗತ ರಾಯ್ ಅವರು ‘’ಭಾರತದ ಟಿವಿ ಚಾನೆಲ್ ವೊಂದು ಹೇಳಿದ್ದನ್ನೇ ನಾನು ಟ್ವೀಟ್ ಮಾಡಿದೆ. ಅದು ನಿಖರ ಮಾಹಿತಿ ಎಂದು ನಾನು ಭಾವಿಸಿದೆ. ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ನಾನು ನನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ. ಮತ್ತೊಮ್ಮೆ ಕ್ಷಮೆ ಇರಲಿ" ಎಂದು ಕ್ಷಮೆ ಯಾಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ