ನವದೆಹಲಿ(ಜು.26): 2020ರ ಏಪ್ರಿಲ್ ಬಳಿಕ ಭಾರತದಲ್ಲಿ ದಾಖಲಾದ ಒಟ್ಟು ಕೋವಿಡ್ ಸೋಂಕಿತರ ಸಾವಿನಲ್ಲಿ ಶೇ.50ರಷ್ಟುಪಾಲು 2021ರ ಏಪ್ರಿಲ್- ಮೇ ತಿಂಗಳಿನದ್ದೇ ಆಗಿದೆ ಎಂದು ಕೇಂದ್ರ ಸರ್ಕಾರ ನೀಡಿರುವ ಅಂಕಿ ಅಂಶಗಳು ತಿಳಿಸಿವೆ.
* 2020ರ ಏಪ್ರಿಲ್ ಬಳಿಕ ಸಾವಿನಲ್ಲಿ ಶೇ.50ರಷ್ಟುಏಪ್ರಿಲ್, ಮೇ ತಿಂಗಳಿನಲ್ಲಿ
* ಸೋಂಕಿತರ ಪಾಲಿಗೆ ಏಪ್ರಿಲ್-ಮೇ ಡೆಡ್ಲಿ
* ಒಟ್ಟು ಸಾವಿನಲ್ಲಿ ಶೇ.41 ಪಾಲು ಮಹಾರಾಷ್ಟ್ರ, ಕರ್ನಾಟಕ, ದೆಹಲಿಯದ್ದು
ಈ ಪೈಕಿ ಶೇ.41ರಷ್ಟುಸಾವಿನ ಪಾಲು ಕೇವಲ ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯದ್ದೇ ಆಗಿದೆ. ಇನ್ನು ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಪಂಜಾಬ್ನಲ್ಲಿ ಕಳೆದ 14 ತಿಂಗಳಲ್ಲಿ ಸಂಭವಿಸಿದ ಒಟ್ಟು ಕೋವಿಡ್ ಸಾವಿನಲ್ಲಿ ಶೇ.60ರಷ್ಟುಕೂಡಾ ಏಪ್ರಿಲ್- ಮೇನಲ್ಲೇ ಸಂಭವಿಸಿವೆ ಎಂಬ ಆಘಾತಕಾರಿ ಅಂಕಿ ಅಂಶಗಳನ್ನು ಸರ್ಕಾರ ಬಿಚ್ಚಿಟ್ಟಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರವು ಈ ಮಾಹಿತಿಯನ್ನು ನೀಡಿದೆ.
ಎನ್ಸಿಡಿಸಿ ನೀಡಿರುವ ಮಾಹಿತಿ ಅನ್ವಯ, 2020ರ ಏಪ್ರಿಲ್ನಿಂದ 2021ರ ಮೇವರೆಗೆ ದೇಶದಲ್ಲಿ 329065 ಸಾವು ಸಂಭವಿಸಿದೆ. ಈ ಪೈಕಿ 166632 ಸಾವು 2021ರ ಏಪ್ರಿಲ್- ಮೇ ತಿಂಗಳಲ್ಲೇ ಸಂಭವಿಸಿದೆ. ಏಪ್ರಿಲ್ ತಿಂಗಳಿನಲ್ಲಿ 45882 ಜನ ಮತ್ತು ಮೇ ತಿಂಗಳಲ್ಲಿ 120770 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ದಾಖಲಾದ ಅತಿ ಹೆಚ್ಚಿನ ಸಾವೆಂದರೆ 2020ರ ಸೆಪ್ಟೆಂಬರ್ ತಿಂಗಳಿನದ್ದು (33035). 2021ರ ಏಪ್ರಿಲ್, ಮೇ ತಿಂಗಳಿನಲ್ಲಿ ದಾಖಲಿಸಲಾಗದ ಕೆಲ ಸಾವನ್ನು ಸೇರಿಸಿ 2021ರ ಜೂನ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಆ ತಿಂಗಳಲ್ಲಿ 69354 ಸಾವು ದಾಖಲಾಗಿತ್ತು ಎಂದು ಮಾಹಿತಿ ನೀಡಿದೆ.
2020ರ ಸೆಪ್ಟೆಂಬರ್- ಅಕ್ಟೋಬರ್ ತಿಂಗಳು ಮೊದಲ ಅಲೆಯ ಗರಿಷ್ಠ ಮಟ್ಟಎಂದು ಪರಿಗಣಿಸಲಾಗಿತ್ತು. ಬಳಿಕ ಕೋವಿಡ್ ಸಾವಿನ ಸಂಖ್ಯೆ 2021ರ ಫೆಬ್ರವರಿಯಲ್ಲಿ 2777ಕ್ಕೆ ಇಳಿದಿತ್ತು ಎಂದು ಸರ್ಕಾರ ಮಾಹಿತಿ ನೀಡಿದೆ.
2ನೇ ಅಲೆ:
ಕೋವಿಡ್ 2ನೇ ಅಲೆಯ ಸುಳಿವು 2021ರ ಮಾಚ್ರ್ ತಿಂಗಳಲ್ಲಿ ಕಂಡುಬರತೊಡಗಿತು. ಆಗ ಪಂಜಾಬ್, ಮಧ್ಯಪ್ರದೇಶ, ಹರಾರಯಣ, ಗುಜರಾತ್ನಲ್ಲಿ ಸಾವಿನ ಪ್ರಮಾಣ ದ್ವಿಗುಣವಾಯಿತು. ಈ ಎಲ್ಲಾ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣವೂ ಭಾರೀ ಪ್ರಮಾಣದಲ್ಲಿ ಏರತೊಡಗಿತ್ತು. ಇದು ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಚುನಾವಣೆಗೆ ರಾಜಕೀಯ ನಾಯಕರು ಹೆಚ್ಚಾಗಿ ಪ್ರಚಾರ ನಡೆಸಿದ್ದ ಸಮಯವಾಗಿತ್ತು.
ಚುನಾವಣೆ ಫಲಿತಾಂಶದ ಬಳಿಕ ಅಂದರೆ ಮೇ 2ರ ಬಳಿಕ ಚುನಾವಣೆ ನಡೆದ 5 ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಯಿತು. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ನಲ್ಲಿ 921 ಇದ್ದ ಸಾವು, ಮೇನಲ್ಲಿ 4161ಕ್ಕೆ, ಆಸ್ಸಾಂನಲ್ಲಿ 177ರಿಂದ 2019ಕ್ಕೆ, ತಮಿಳುನಾಡಿನಲ್ಲಿ 1233ರಿಂದ 9821ಕ್ಕೆ, ಕೇರಳದಲ್ಲಿ 653ರಿಂದ 3382ಕ್ಕೆ ಏರಿತು ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ