ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ವಾರದೊಳಗೆ ಬಿಬಿಎಂಪಿಯ 243 ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿರುವ ರಾಜ್ಯ ಸರ್ಕಾರ ಬುಧವಾರ ತಡರಾತ್ರಿಯೇ ಕರಡು ಪಟ್ಟಿಯನ್ನು ಪ್ರಕಟಿಸಿದೆ.
ಕಳೆದ ವಾರ ಬಿಬಿಎಂಪಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಂ.ಖಾನಿಲ್ಕರ್ ಪೀಠ 8 ವಾರಗಳಲ್ಲಿ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿತ್ತು.
ಇದಕ್ಕೆ ಉತ್ತರಿಸಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಮೀಸಲಾತಿ ಸಂಬಂಧ ರಚಿಸಲಾಗಿದ್ದ ಭಕ್ತ ವತ್ಸಲ ಸಮಿತಿ ವರದಿಯನ್ನು ವಿಳಂಬವಾಗಿ ನೀಡಿದೆ. ಆದ್ದರಿಂದ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಒಂದು ವಾರದೊಳಗೆ 243 ವಾರ್ಡ್ಗಳ ಮೀಸಲಾತಿ ಅಂತಿಮಗೊಳಿಸುವಂತೆ ಗಡುವು ನೀಡಿತ್ತು. ಅದರಂತೆ ಬಿಬಿಎಂಪಿ ಮೀಸಲು ಪ್ರಕಟ ಮಾಡಿದೆ.