ನವದೆಹಲಿ(ಜು.19): ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ನ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿರುವ ಮಾಹಿತಿ ಬಯಲಾಗಿದೆ.
* ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ನ ಇಬ್ಬರು ಸಚಿವರು ಸೇರಿ ಅನೇಕರ ಮೊಬೈಲ್ ಹ್ಯಾಕ್
* ಇಸ್ರೇಲ್ ಮೂಲದ ಕಣ್ಗಾವಲು ಕಂಪನಿ ಎನ್ಎಸ್ಒ ಗ್ರೂಪ್ನ ಪೆಗಾಸಸ್ ಸಾಫ್ಟ್ವೇರ್ನಿಂದ ಈ ಮೊಬೈಲ್ ಸಂಖ್ಯೆಗಳು ಹ್ಯಾಕ್
* ಯಾವುದೇ ವ್ಯಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ವಹಿಸಿಲ್ಲ ಎಂದ ಕಂಪನಿ
ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುವ ಇಸ್ರೇಲ್ ಮೂಲದ ಕಣ್ಗಾವಲು ಕಂಪನಿ ಎನ್ಎಸ್ಒ ಗ್ರೂಪ್ನ ಪೆಗಾಸಸ್ ಸಾಫ್ಟ್ವೇರ್ನಿಂದ ಈ ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ. ಆದರೆ ಯಾವುದೇ ವ್ಯಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ವಹಿಸಿಲ್ಲ. ಎಂದು ಭಾರತ ಸರ್ಕಾರ ಹೇಳಿದೆ.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ತನ್ನೆಲ್ಲಾ ಪ್ರಜೆಗಳ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಜೊತೆಗೆ ಮಾಧ್ಯಮ ವರದಿಯನ್ನು ತನಿಖಾಧಿಕಾರಿ, ಪ್ರಾಸಿಕ್ಯೂಟರ್ ಮತ್ತು ತೀರ್ಪುಗಾರರ ಪಾತ್ರ ವಹಿಸುವ ಯತ್ನವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ದಿ ವೈರ್ ವೆಬ್ಸೈಟ್ ವಿಶ್ವಾದ್ಯಂತ 50 ಸಾವಿರ ಮೊಬೈಲ್ ಸಂಖ್ಯೆಗಳನ್ನು ಇಸ್ರೇಲ್ನ ಕಣ್ಗಾವಲು ಕಂಪನಿ ಎನ್ಎಸ್ಒ ಗ್ರೂಪ್ನ ಪೆಗಾಸಸ್ ಸಾಫ್ಟ್ವೇರ್ನಿಂದ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿದ್ದವು.