ನವದೆಹಲಿ : ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಹಾದಿ ಸುಗಮವಾಗಿದೆ. ಒಂದೇ ದಿನ ಮೂರು ಲಸಿಕೆಗೆ ಅನುಮತಿ ಸಿಕ್ಕಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು 6 ರಿಂದ 12 ವರ್ಷದ ಮಕ್ಕಳಿಗೆ ನೀಡಲು ಭಾರತ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ತುರ್ತು ಅನುಮತಿ ನೀಡಿದೆ.
5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯೊಲಾಜಿಕಲ್-ಇ ಸಂಸ್ಥೆ ತಯಾರಿಸಿದ ಕಾರ್ಬೇವ್ಯಾಕ್ಸ್ ಲಸಿಕೆ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜೈಡಸ್ ಕ್ಯಾಡಿಲ್ಲಾ ಅಭಿವೃದ್ಧಿಪಡಿಸಿರುವ ಜೈಕೋವ್ ಡಿ ಲಸಿಕೆಯ ತುರ್ತು ಬಳಕೆಗೂ ಡಿಸಿಜಿಐ ಅನುಮೋದನೆ ನೀಡಿದೆ.
ಮೂರು ಸಂಸ್ಥೆಗಳಿಗೂ ಡಿಸಿಜಿಐ ಕೆಲ ಷರತ್ತುಗಳನ್ನು ವಿಧಿಸಿದೆ. ಲಸಿಕೆ ಹಂಚಿಕೆಯಾದ ನಂತರ ಮೊದಲ ಎರಡು ತಿಂಗಳು ಪ್ರತಿ 15 ದಿನಕ್ಕೊಮ್ಮೆ ಭದ್ರತಾ ದತ್ತಾಂಶಗಳನ್ನು ಡಿಸಿಜಿಐಗೆ ಸಲ್ಲಿಸಬೇಕು. ಆ ನಂತರ ಐದು ತಿಂಗಳಿಗೊಮ್ಮೆ ವಿವರಗಳನ್ನು ನೀಡಬೇಕು ಎಂದು ಸೂಚಿಸಿದೆ.