ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆದರೆ ಇದೀಗ ಪ್ರಸಾರವಾಗುತ್ತಿರುವ ಕತೆಯ ಬಗ್ಗೆ ನೆಟ್ಟಿಗರಿಂದ ಅಪಸ್ವರ ಕೇಳಿಬಂದಿದೆ.
ಹಿರಿಯ ವಯಸ್ಸಿನ ಜೋಡಿಯ ಪ್ರೇಮ ಕತೆ ಹೊಂದಿರುವ ಧಾರವಾಹಿ ಇದಾಗಿದೆ. ಈ ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿ, ತುಳಸಿ ಪಾತ್ರ ಮಾಡುತ್ತಿದ್ದರೆ ಅವರಿಗೆ ನಾಯಕನಾಗಿ ಅಜಿತ್ ಹಂದೆಯವರು ಮಾಧವನಾಗಿ ಅಭಿನಯಿಸುತ್ತಿದ್ದಾರೆ. ವಯಸ್ಸಿಗೆ ಬಂದ ಮಕ್ಕಳಿದ್ದರೂ ಜೀವನದಲ್ಲಿ ಒಂಟಿತನ ಕಾಡುವ ಹೊತ್ತಿನಲ್ಲಿ ಹಿರಿಯ ಜೀವಗಳೆರಡೂ ತಮ್ಮಲ್ಲಿ ಜೀವನ ಸಂಗಾತಿಯನ್ನು ಕಂಡುಕೊಳ್ಳುವ ಕಥಾಹಂದರ ಇದರಲ್ಲಿದೆ.
ಆದರೆ ಇದೀಗ ತುಳಸಿ ಗರ್ಭಿಣಿ ಎನ್ನುವಂತೆ ಕತೆ ಮಾಡಲಾಗಿದೆ. ಇದಕ್ಕೆ ವೀಕ್ಷಕರು ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಸುಧಾರಾಣಿಯಂತಹ ಹಿರಿಯ ನಟಿ ಇಂತಹ ಮುಜುಗರದ ಸನ್ನಿವೇಶದಲ್ಲಿ ಅಭಿನಯಿಸಬಾರದಿತ್ತು. ಈ ವಯಸ್ಸಿನಲ್ಲಿ ಗರ್ಭಿಣೀನಾ? ಇದನ್ನು ನೋಡಲು ಮುಜುಗರವಾಗುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಹಿರಿಯ ವಯಸ್ಸಿನಲ್ಲಿ ಅಮ್ಮನಾಗುವ ಮುಜುಗರದ ಸಂದರ್ಭ, ಅದನ್ನು ಮನೆಯವರು ಹೇಗೆ ಸ್ವೀಕರಿಸುತ್ತಾರೆ ಎಂಬಿತ್ಯಾದಿ ಸನ್ನಿವೇಶಗಳು ಮುಂದಿನ ಎಪಿಸೋಡ್ ಗಳಲ್ಲಿ ಇರಲಿದೆ. ಆದರೆ ಇದರ ಬಗ್ಗೆ ಈ ಕ್ಷಣಕ್ಕೆ ನೆಟ್ಟಿಗರಿಂದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿವೆ.