Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀಗೌರಿ ಧಾರವಾಹಿಯಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನ ಪ್ರದರ್ಶನ ಮಾಡುವ ದೃಶ್ಯವೊಂದನ್ನು ಪ್ರಸಾರ ಮಾಡಲಾಗುತ್ತಿದೆ.
ಈ ಧಾರವಾಹಿ ಕರಾವಳಿ ಹಿನ್ನಲೆಯಲ್ಲಿ ನಡೆಯುವ ಕತೆ. ನಾಯಕ ಮತ್ತು ನಾಯಕಿಯ ಕುಟುಂಬ ಮಂಗಳೂರು ಭಾಗದಲ್ಲಿ ನೆಲೆಸಿರುವುದಾಗಿ ಚಿತ್ರಣ ನೀಡಲಾಗಿದೆ. ಆರಂಭದಲ್ಲೇ ಕಂಬಳದ ದೃಶ್ಯವೊಂದನ್ನು ಪ್ರೇಕ್ಷಕರಿಗೆ ತೋರಿಸಲಾಗಿತ್ತು. ಇದೀಗ ಯಕ್ಷಗಾನ ದೃಶ್ಯ ಪ್ರಸಾರವಾಗಲಿದೆ.
ನಾಯಕನ ತಾಯಿಯ ಹುಟ್ಟುಹಬ್ಬದ ಅಂಗವಾಗಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಸನ್ನಿವೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಮಂಗಳೂರು ಭಾಗದಲ್ಲಿ ಪ್ರಖ್ಯಾತವಾಗಿರುವ ತೆಂಕುತಿಟ್ಟಿನ ಶೈಲಿಯ ಯಕ್ಷಗಾನದ ತುಣುಕನ್ನು ಪ್ರಸಾರ ಮಾಡಲಾಗುತ್ತಿದೆ.
ಈಗಾಗಲೇ ವಾಹಿನಿ ಈ ಬಗ್ಗೆ ಪ್ರೋಮೋ ಹರಿಯಬಿಟ್ಟಿದೆ. ಆದರೆ ಪ್ರೋಮೋ ನೋಡಿ ಪ್ರೇಕ್ಷಕರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಕರಾವಳಿಯ ಕಲೆಯನ್ನು ಪರಿಚಯಿಸುತ್ತಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಕೆಲವರು ಕರಾವಳಿ ಕಲೆಗೆ ಯಾವುದೇ ಕಾರಣಕ್ಕೂ ಅವಮಾನವಾಗುವ ರೀತಿಯಲ್ಲಿ ತೋರಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮೊದಲು ಸುವರ್ಣ ವಾಹಿನಿಯಲ್ಲಿ ಕರಾವಳಿಯ ದೈವ ಕೋಲದ ಬಗ್ಗೆ ಚಿತ್ರೀಕರಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ದೈವದ ಬಗ್ಗೆ ಕರಾವಳಿಗರಲ್ಲಿ ಅಪಾರ ಭಕ್ತಿಯಿದ್ದು, ಇದನ್ನು ವ್ಯಾವಹಾರಿಕ ಉದ್ದೇಶಕ್ಕೆ ವೇಷ ಹಾಕಿಕೊಂಡು ಕುಣಿಯುವಂತೆ ತೋರಿಸುತ್ತಿರುವುದನ್ನು ಸಹಿಸಲ್ಲ ಎಂದು ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಯಕ್ಷಗಾನವನ್ನು ತೋರಿಸಲಾಗುತ್ತಿದ್ದು, ಇದೇ ಕಾರಣಕ್ಕೆ ನೆಟ್ಟಿಗರು ಕಲೆಗೆ ಅಪಚಾರವಾಗದಂತೆ ತೋರಿಸಿ ಎಂದು ಮೊದಲೇ ಎಚ್ಚರಿಕೆ ನೀಡಿದ್ದಾರೆ.