ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರವಾಹಿಗಳ ಹಾವಳಿ ಕುರಿತು ಇದೀಗ ಕಿರುತೆರೆಯ ಪ್ರಮುಖ ನಟರಾದ ಚಂದನ್ ಕುಮಾರ್, ಅನಿರುದ್ಧ್ ಧ್ವನಿಯೆತ್ತಿದ್ದಾರೆ.
ಇತ್ತೀಚೆಗಷ್ಟೇ ಕಿರುತೆರೆಯಲ್ಲಿ ಕನ್ನಡ ಮೂಲದ ಧಾರವಾಹಿಗಳನ್ನು ಅರ್ಧಕ್ಕೆ ನಿಲ್ಲಿಸಿ ಬೇರೆ ಭಾಷೆಯ ಧಾರವಾಹಿಗಳನ್ನು ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಕನ್ನಡ ಕಲಾವಿದರು, ತಂತ್ರಜ್ಞರಿಗೆ ಕೆಲಸವಿಲ್ಲದಂತಾಗಿದೆ. ಇಲ್ಲಿನ ಜನರ ಅನ್ನ ಕಿತ್ತುಕೊಂಡು ಪರಭಾಷೆ ಧಾರವಾಹಿಗಳನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ವಾಹಿನಿಗಳ ವಿರುದ್ಧ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಕೆಲವು ನಟರು ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಆಕ್ಷೇಪವ್ಯಕ್ತಪಡಿಸಿದ್ದಾರೆ.
ಇದೀಗ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಅನಿರುದ್ಧ್ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಡಬ್ಬಿಂಗ್ ಧಾರವಾಹಿ ಪ್ರಸಾರ ಮಾಡುವುದರಿಂದ ಇಲ್ಲಿನ ಎಷ್ಟೋ ಕಲಾವಿದರು, ತಂತ್ರಜ್ಞರ ಕುಟುಂಬಕ್ಕೆ ಹೊಡೆತ ಬಿದ್ದಿದೆ ಎಂದಿದ್ದಾರೆ.
ಇದಾದ ಬಳಿಕ ನಟ ಚಂದನ್ ಕುಮಾರ್ ಕೂಡಾ ಇದರ ಬಗ್ಗೆ ಪ್ರಸ್ತಾಪಿಸಿದ್ದು, ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಡಬ್ಬಿಂಗ್ ಧಾರವಾಹಿ ಕನ್ನಡಕ್ಕೆ ಕುತ್ತು ಎಂದು ನೀವು ಒಪ್ಪುತ್ತೀರಾ ಎಂದು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ.