ಪ್ಯಾರಿಸ್: ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಂದಿನಿಂದ ಶುರುವಾಗಲಿದೆ. ಅಧಿಕೃತವಾಗಿ ಕೂಟ ಜುಲೈ 26 ಕ್ಕೆ ಆರಂಭವಾಗುತ್ತಿದ್ದರೂ ಇಂದಿನಿಂದಲೇ ಕೆಲವು ಪಂದ್ಯಗಳು ಆರಂಭವಾಗುತ್ತಿವೆ.
ವಿಶ್ವದ ಜನಪ್ರಿಯ ಕ್ರೀಡೆಯಾಗಿರುವ ಫುಟ್ಬಾಲ್ ನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಅರ್ಜೆಂಟೈನಾ ಮತ್ತು ಮೊರಕ್ಕೊ ತಂಡಗಳು ಮುಖಾಮುಖಿಯಾಗುತ್ತಿವೆ. ಫುಟ್ಬಾಲ್ ನಂತಹ ಪಂದ್ಯಗಳನ್ನು ಆಡುವಾಗ ಆಟಗಾರರಿಗೆ ಬ್ರೇಕ್ ಬೇಕಾಗುತ್ತದೆ. ಒಂದೇ ದಿನ ಎರಡು ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಫುಟ್ಬಾಲ್, ರಗ್ಬಿಯಂತಹ ಕ್ರೀಡೆಗಳು ಮೊದಲೇ ಆರಂಭವಾಗುತ್ತದೆ.
ಈ ಬಾರಿಯೂ ಭಾರತ 117 ಅಥ್ಲೆಟ್ ಗಳನ್ನು ಒಲಿಂಪಿಕ್ಸ್ ಗೆ ಕಳುಹಿಸಿದೆ. ಜುಲೈ 26 ರಂದು ಪಥಸಂಚಲನ ನಡೆಯಲಿದ್ದು, ಭಾರತದ ಪರ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಭಾರತದ ನಿಯೋಗವನ್ನು ಮುನ್ನಡೆಸಲಿದ್ದಾರೆ.
ಭಾರತದ ಒಲಿಂಪಿಕ್ಸ್ ಅಭಿಯಾನ ನಾಳೆಯಿಂದ ಆರಂಭವಾಗಲಿದೆ. ನಾಳೆ ಬಿಲ್ಗಾರಿಕೆ ವಿಭಾಗದಲ್ಲಿ ಭಾರತೀಯ ತಾರೆಯರು ನಾಳೆ ಶ್ರೇಯಾಂಕ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಒಲಿಂಪಿಕ್ಸ್ ಕ್ರೀಡಾಕೂಟದ ಎಲ್ಲಾ ಪಂದ್ಯಗಳನ್ನೂ ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.