ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪರ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ ಮನು ಭಾಕರ್ ಗೆ ಅರ್ಹತಾ ಸುತ್ತಿನ ಪಂದ್ಯದ ವೇಳೆ ಪಿಸ್ತೂಲ್ ಕೈ ಕೊಟ್ಟ ಘಟನೆ ನಡೆದಿದೆ.
ಇದರಿಂದಾಗಿ ಮನು ಭಾಕರ್ ಮೈದಾನದಲ್ಲೇ ಕಣ್ಣೀರು ಸುರಿಸಿದರು. ಪಿಸ್ತೂಲ್ ಸರಿಪಡಿಸಿಕೊಂಡು ಮತ್ತೆ ಮೈದಾನಕ್ಕಿಳಿದಾಗ ಅವರಿಗೆ ಕೇವಲ 36 ನಿಮಿಷ ಬಾಕಿಯಿತ್ತು. ಇಷ್ಟರಲ್ಲೇ 44 ಶಾಟ್ ಗಳನ್ನು ಹೊಡೆಯಬೇಕಿತ್ತು.
ಆದರೆ ಸಮಯದ ಅಭಾವದಿಂದ ಸಾಧ‍್ಯವಾಗದೇ ಹೋದಾಗ ಅವರು ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಕೇವಲ 2 ಅಂಕಗಳಿಂದ ಅವರು ಅರ್ಹತಾ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗಲು 577 ಅಂಕ ಪಡೆಯಬೇಕಿತ್ತು. ಆದರೆ ಭಾಕರ್ 575 ಅಂಕ ಪಡೆದರು. ವಿಶ್ವ ನಂ.2 ಶ್ರೇಯಾಂಕಿತೆಯಾಗಿದ್ದ ಮನು ಮೇಲೆ ಅಪಾರ ನಿರೀಕ್ಷೆಯಿತ್ತು.