ನವದೆಹಲಿ: ಇತ್ತಿಚೆಗೆ ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿಯೂ ತೂಕ ಸಮಸ್ಯೆಯಿಂದಾಗಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ಭಾರತಕ್ಕೆ ಬಂದಿಳಿದಿದ್ದಾರೆ. ಅವರನ್ನು ಕುಸ್ತಿ ಸ್ನೇಹಿತರು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ವಿನೇಶ್ ರನ್ನು ಅನರ್ಹಗೊಳಿಸಿದ್ದರಿಂದ ಕನಿಷ್ಠ ಅವರಿಗೆ ಬೆಳ್ಳಿ ಪದಕವನ್ನಾದರೂ ನೀಡಿ ಎಂದು ಅಂತಾರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಕ್ಕೆ ಭಾರತ ಮೇಲ್ಮನವಿ ಸಲ್ಲಿಸಿತ್ತು. ಆದರೆ ಇದರ ವಿಚಾರಣೆ ನಡೆದು ವಿನೇಶ್ ಮನವಿ ತಿರಸ್ಕೃತವಾಗಿತ್ತು. ಇದರ ಬೆನ್ನಲ್ಲೇ ನಿರಾಸೆಯಿಂದಲೇ ವಿನೇಶ್ ಪ್ಯಾರಿಸ್ ನಿಂದ ನಿರ್ಗಮಿಸಿದ್ದರು.
ಇದೀಗ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿನೇಶ್ ರನ್ನು ಅವರ ಕುಸ್ತಿ ಪಟು ಸ್ನೇಹಿತರಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಅಪಾರ ಸಂಖ್ಯೆ ಯ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಅನರ್ಹತೆಯಿಂದಾಗಿ ಪದಕ ಗೆಲ್ಲದೇ ಇದ್ದರೂ ವಿನೇಶ್ ಗೆ ಪದಕ ಗೆದ್ದಷ್ಟೇ ಗೌರವ ಸಿಕ್ಕಿದೆ.
ಈ ಹಿಂದೆ ಕುಸ್ತಿ ಫೆಡರೇಷನ್ ವಿರುದ್ಧದ ಹೋರಾಟದಲ್ಲಿ ವಿನೇಶ್, ಸಾಕ್ಷಿ ಮಲಿಕ್, ಬಜರಖಗ್ ಪೂನಿಯಾ ಜೊತೆಗಿದ್ದರು. ಇದೀಗ ವಿನೇಶ್ ಭಾರತಕ್ಕೆ ಬಂದ ಬೆನ್ನಲ್ಲೇ ಈ ಕುಸ್ತಿಪಟುಗಳು ಆಕೆಯನ್ನು ಬರಮಾಡಿಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದು ಅವರೆಲ್ಲರೂ ಚಾಂಪಿಯನ್ ಎಂದು ಕೂಗುವ ಮೂಲಕ ವಿನೇಶ್ ಗೆ ಪದಕ ಗೆಲ್ಲಲು ಸಾಧ್ಯವಾಗದೇ ಇರುವ ನೋವು ಮರೆಸುವ ಯತ್ನ ಮಾಡಿದ್ದಾರೆ.