ಮುಂಬೈ: ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿ ಯಶಸ್ವಿಯಾಗಿದ್ದ ಪಿಆರ್ ಶ್ರೀಜೇಶ್ ಎರಡನೇ ಒಲಿಂಪಿಕ್ಸ್ ಪದಕದೊಂದಿಗೆ ವೃತ್ತಿ ಬದುಕಿನಿಂದ ನಿವೃತ್ತಿಯಾಗಿದ್ದಾರೆ. ಅವರಿಗೀಗ ಧೋನಿ, ಸಚಿನ್ ಗೆ ಸಿಕ್ಕ ಗೌರವ ಸಿಕ್ಕಿದೆ.
ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವಂತಿದ್ದ ಕಾಲದಲ್ಲಿ ಇತ್ತೀಚೆಗೆ ಬೇರೆ ಕ್ರೀಡಾ ಕ್ಷೇತ್ರದ ತಾರೆಯರೂ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರಲ್ಲಿ ಪಿಆರ್ ಶ್ರೀಜೇಶ್ ಕೂಡಾ ಒಬ್ಬರು. ಭಾರತ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಆಗಿದ್ದ ಶ್ರೀಜೇಶ್ ರನ್ನು ಅಭಿಮಾನಿಗಳು ಹಾಕಿ ಲೋಕದ ಮಹಾಗೋಡೆ ಎಂದೇ ಕರೆಯುತ್ತಿದ್ದಾರೆ.
ಅವರು ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ತಮ್ಮ ಕೊನೆಯ ಟೂರ್ನಿ ಎಂದಿದ್ದರು.ಅದರಂತೆ ಕಂಚಿನ ಪದಕ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ ನೊಂದಿಗೆ ಹಾಕಿ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದರು. ಇದೀಗ ಅವರಿಗೆ ಹಾಕಿ ಇಂಡಿಯಾ ಸಂಸ್ಥೆ ಬಹುದೊಡ್ಡ ಗೌರವ ನೀಡಿದೆ.
ಪಿಆರ್ ಶ್ರೀಜೇಶ್ ಧರಿಸುತ್ತಿದ್ದ ಜೆರ್ಸಿ ನಂ.16 ಗೂ ಹಾಕಿ ಇಂಡಿಯಾ ನಿವೃತ್ತಿ ನೀಡಿದೆ. ಇನ್ನು ಮುಂದೆ ಹಾಕಿ ತಂಡದಲ್ಲಿ ಯಾರೂ ಈ ಸಂಖ್ಯೆಯ ಜೆರ್ಸಿ ಧರಿಸುವಂತಿಲ್ಲ. ಇದಕ್ಕೆ ಮೊದಲು ಕ್ರಿಕೆಟ್ ಜಗತ್ತಿನಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ ನಂ.10 ಮತ್ತು ಧೋನಿ ಧರಿಸುತ್ತಿದ್ದ ನಂ.7 ಜೆರ್ಸಿ ಸಂಖ್ಯೆಯನ್ನು ಬಿಸಿಸಿಐ ಈ ಇಬ್ಬರ ಗೌರವಾರ್ಥ ನಿವೃತ್ತಿ ಹೇಳಿದ್ದರು. ಈಗ ಶ್ರೀಜೇಶ್ ಗೂ ಇದೇ ಗೌರವ ಸಿಕ್ಕಿದೆ.