ಕೊಲಂಬೋ: ಶ್ರೀಲಂಕಾ ವಿರುದ್ಧ ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಪ್ರಯಾಸದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-0 ಯಿಂದ ಮುನ್ನಡೆ ಸಾಧಿಸಿದೆ. ಇನ್ನೇನು ಸೋಲು ಖಚಿತ ಎಂಬಂತಿದ್ದ ಪಂದ್ಯವನ್ನು ವೇಗಿ ದೀಪಕ್ ಚಾಹರ್ ಗೆಲ್ಲಿಸಿ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ. ಶತಕದ ಗಡಿ ದಾಟುವ ಒಳಗೆ ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ಭಾರತ, 49 ಓವರ್ನ ಮೊದಲ ಬಾಲ್ನಲ್ಲಿ ಗೆಲುವು ಕಂಡಿದೆ.
ಮುಂಚೂಣಿ ದಾಂಡಿಗರು ಲಂಕಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿದರೂ ಬಾಲಂಗೋಚಿಗಳಾದ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಜೋಡಿ ಏಳನೇ ವಿಕೆಟ್ಗೆ ಅತ್ಯುತ್ತಮ ಜತೆಯಾಟವಾಡಿ ಮುಳುಗುತ್ತಿದ್ದ ಹಡಗನ್ನು ದಡ ತಲುಪಿಸಿದರು.
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ 50 ಓವರ್ಗಳಲ್ಲಿ 275 ರನ್ ಕಲೆಹಾಕಿ ಸಾಧಾರಣ ಟಾರ್ಗೆಟ್ ನೀಡಿತು. ಮೊದಲ ಪಂದ್ಯ ಗೆದ್ದ ಸಂತಸದಲ್ಲಿದ್ದ ಇನ್ ಫಾರ್ಮ್ ಭಾರತ ತಂಡ ಈ ಮೊತ್ತವನ್ನು ಬೇಗ ಕಲೆಹಾಕುವ ನಿರೀಕ್ಷೆಯಲ್ಲಿ ಇನ್ನಿಂಗ್ಸ್ ಆರಂಭಿಸಿತಾದರೂ, ಆರಂಭಿಕ ಜೋಡಿ ನಾಯಕ ಶಿಖರ್ ಧವನ್ (29) ಮತ್ತು ಪೃಥ್ವಿ ಶಾ (13) ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ ಕೂಡ ಕೇವಲ ಒಂದು ರನ್ಗೆ ಪೆವಿಲಿಯನ್ ದಾರಿ ಹಿಡಿದರು. ಈ ವೇಳೆ ಜತೆಯಾದ ಕರ್ನಾಟಕ ಮೂಲದ ಆಟಗಾರ ಮನೀಶ್ ಪಾಂಡೆ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಜತೆಯಾಟವಾಡಿ ಕೇವಲ 31 ಬಾಲ್ಗಳಲ್ಲಿ 50 ರನ್ ಕಲೆ ಹಾಕಿದರು. ಆದರೆ ಉತ್ತಮ ಫಾರ್ಮ್ನಲ್ಲಿ ಕಂಡುಬಂದ ಮನೀಶ್ ಪಾಂಡೆ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು.
ನಂತರ ಬಂದ ಹಾರ್ದಿಕ್ ಪಾಂಡ್ಯ ಖಾತೆ ತೆರೆಯದೇ ವಾಪಸಾದರು. ಒಂದೆಡೆ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆಲ್ರೌಂಡರ್ ಕ್ರುನಾಲ್ ಪಾಂಡ್ಯ, ಯಾದವ್ ಜತೆಗೂಡಿ ಉತ್ತಮ ಮೊತ್ತ ಕಲೆಹಾಕುತ್ತಿದ್ದರಾದರೂ 35 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಅರ್ಧಶತಕದ ಬೆನ್ನಲ್ಲೇ 53 ರನ್ಗಳಿಸಿ ಔಟಾದರು.
ಇಲ್ಲಿಗೆ ಭಾರತ ತಂಡದ ಸೋಲು ಬಹುತೇಕ ಖಚಿತ ಎನ್ನುವಂತಾಗಿತ್ತು. ಈ ಸಂದರ್ಭದಲ್ಲಿ ಜತೆಯಾದ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಏಳನೇ ವಿಕೆಟ್ಗೆ ದಾಖಲೆಯ ಜತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿದರು. ದೀಪಕ್ ಚಾಹರ್ 82 ಬಾಲ್ಗಳಲ್ಲಿ 69 ರನ್ ಗಳಿಸಿ ನಾಟೌಟ್ ಆಗಿ ಒಂದೆಡೆ ಉಳಿದರೆ, ಭುವನೇಶ್ವರ್ ಕುಮಾರ್ 28 ಬಾಲ್ಗಳಲ್ಲಿ 19 ರನ್ ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೋಚ್ ರಾಹುಲ್ ದ್ರಾವಿಡ್ ಮತ್ತು ಶಿಖರ್ ಧವನ್ ನಾಯಕತ್ವದಲ್ಲಿ ಭಾರತದ ಒಂದು ತಂಡ ಶ್ರೀಲಂಕಾದಲ್ಲಿ ಏಕದಿನ ಸರಣಿ ಆಡುತ್ತಿದೆ. ಇನ್ನೊಂದೆಡೆ ಇಂಗ್ಲೆಂಡ್ ಸರಣಿಗೆ ಮತ್ತೊಂದು ತಂಡ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಇಂಗ್ಲೆಂಡ್ನಲ್ಲಿ ಕೌಂಟಿ ತಂಡದ ಜೊತೆ ಪ್ರಾಕ್ಟಿಸ್ ಮ್ಯಾಚ್ ಆಡುತ್ತಿದೆ. ಶ್ರೀಲಂಕಾ ವಿರುದ್ಧ ಐತಿಹಾಸಿಕ ವಿಜಯದ ಬೆನ್ನಲ್ಲೇ ಸ್ಕಿಪ್ಪರ್ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ತಂಡಕ್ಕೆ ಶುಭಾಶಯ ಕೋರಿದ್ದಾರೆ. ದೀಪಕ್ ಚಾಹರ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
ದೀಪಕ್ ಚಾಹರ್ ಅವರ ಅಮೋಘ ಪ್ರದರ್ಶನವನ್ನು ಬಿಸಿಸಿಐ ಕೂಡ ಶ್ಲಾಘಿಸಿ ಟ್ವೀಟ್ ಮಾಡಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಗೆಲುವಿನ ಬಗ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: ಅವಿಶ್ಕಾ ಫರ್ನಾಂಡೋ: 50
ಚರಿತ್ ಅಸಲಂಕಾ: 65
ಚಮಿಕಾ ಕರುಣರತ್ನೆ: 44
ಭಾರತ: ದೀಪಕ್ ಚಾಹರ್: 69
ಸೂರ್ಯಕುಮಾರ್ ಯಾದವ್: 53
ಮನೀಶ್ ಪಾಂಡೆ: 37