Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೈದರಾಬಾದ್ ಕರ್ನಾಟಕದಾದ್ಯಂತ ಎಳ್ಳಾಮಾವಾಸ್ಯೆಯ ಸಂಭ್ರಮ

ಹೈದರಾಬಾದ್ ಕರ್ನಾಟಕದಾದ್ಯಂತ ಎಳ್ಳಾಮಾವಾಸ್ಯೆಯ ಸಂಭ್ರಮ

ಜಗದೀಶ್ ಕುಂಬಾರ್

ಕಲಬುರಗಿ , ಮಂಗಳವಾರ, 19 ಡಿಸೆಂಬರ್ 2017 (13:31 IST)
ಹೈದರಾಬಾದ್ ಕರ್ನಾಟಕದಾದ್ಯಂತ ಎಳ್ಳಾಮಾವಾಸ್ಯೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹೊಲಗಳಲ್ಲಿ ಬೆಳೆದ ವಿವಿಧ ಧಾನ್ಯ, ತರಕಾರಿ ಮಿಶ್ರಣದ ಭಜಿ, ಜೋಳದ ಕಡುಬು ಸಿದ್ಧಪಡಿಸಿದ ರೈತ ಸಮುದಾಯ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ಗೌರವ ಸಮರ್ಪಿಸಿದ್ರು.

ಹೆಣ್ಣು ಗರ್ಭಿಣಿಯಿದ್ದಾಗ ಹೇಗೆ ವಿವಿಧ ತಿಂಡಿಗಳನ್ನು ಸಿದ್ಧಪಡಿಸಿ ಶಿಮಂತ ಕಾರ್ಯಕ್ರಮ ಮಾಡಲಾಗುತ್ತದೆಯೋ ಹಾಗೆಯೇ ವೈವಿಧ್ಯಮಯ ಭಕ್ಷ್ಯಗಳನ್ನು ಫಲ ಹೊತ್ತು  ನಿಂತ ಭೂ ತಾಯಿಗೆ ಸಮರ್ಪಿಸಲಾಯಿತು. ಹೊಲದಲ್ಲಿಯೇ ವೈವಿಧ್ಯಯಮ ಭಕ್ಷ್ಯಗಳನ್ನು ಸಿದ್ಧಪಡಿಸಿ ಸಹಪಂಕ್ತಿಯಲ್ಲಿ ಕುಳಿತು ಸವಿಯಲಾಯಿತು.
 
ಎಳ್ಳಾಮಾವಾಸೆ, ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬ. ಎಲ್ಲರ ಜೀವನಾಧಾರ ಎನಿಸಿರುವ ಭೂಮಾತೆಗೆ ಪೂಜೆ ಸಲ್ಲಿಸಲೆಂದು ಈ ಹಬ್ಬವನ್ನು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಹೈದರಾಬಾದ್ ಕರ್ನಾಟಕದಾದ್ಯಂತ ಎಳ್ಳಾಮಾವಾಸೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮಾನ್ಯವಾಗಿ ಹೆಣ್ಣು ಮಗಳು ಗರ್ಭ ಧರಿಸಿದಾಗ ಆಕೆಯ ಅಪೇಕ್ಷೆಗೆ ಅನುಗುಣವಾಗಿ ವೈವಿಧ್ಯಮಯ ಖಾದ್ಯೆಗಳನ್ನು ಸಿದ್ದಪಡಿಸಿ ಸಿಮಂತ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
webdunia

ಅದರಂತೆ ಭೂ ತಾಯಿಯೂ ಫಲ ಹೊತ್ತು ನಿಂತಿದ್ದಾಳೆ. ಆಕೆಗೂ ಸಿಮಂತದಂತಹ ಕಾರ್ಯಕ್ರಮ ಮಾಡಲೆಂದೇ ಎಳ್ಳಾಮಾವಾಸೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಿ ಚರಗ ಚೆಲ್ಲಲಾಗುತ್ತದೆ. ಆ ಮೂಲಕ ಭೂತಾಯಿಗೆ  ಗೌರವ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ರೈತ ಮಹಿಳೆ ಹೇಮಲತಾ.
 
ಹೊಲದಲ್ಲಿ ಬೆಳೆದ ಧಾನ್ಯ ಹಾಗೂ ತರಕಾರಿಗಳಿಂದ ಭಜಿ ಸಿದ್ಧಪಡಿಸಿ, ಜೋಳ ಮತ್ತು ಸಜ್ಜೆಯ ಕಡುಬುಗಳನ್ನು ತಯಾರಿಸಿ, ಚರಗ ಚೆಲ್ಲಿದ ನಂತರ ಅದೇ ಭಕ್ಷ್ಯಗಳನ್ನು ಸಾಮೂಹಿಕ ಪಂಕ್ತಿಯಲ್ಲಿ ಕುಳಿತು ಸವಿಯಲಾಗುತ್ತದೆ. ಎಳಾಮಾವಾಸ್ಯೆಯ ಅಂಗವಾಗಿ ಕಲಬುರಗಿ ಹೊರವಲಯದಲ್ಲಿ ಶ್ರೇಷ್ಠ ವಚನಕಾರ ಒಕ್ಕಲಿಗ ಮುದ್ದಣ್ಣನ ಸ್ಮರಣೆಯೂ ಕೂಡ ಇದೇ ವೇಳೆ ಮಾಡಲಾಯಿತು.

ವಚನಗಳನ್ನು ಹಾಡಿ, ವಚನಕಾರ ಒಕ್ಕಲಿಗ ಮುದ್ದಣ್ಣನನ್ನು ನೆನೆಯಲಾಯಿತು. ಸಕಲ ಜೀವರಾಶಿಯನ್ನು ಸಾಕಿ ಸಲಹುವ ಭೂ ತಾಯಿಗೆ ಈ ಮೂಲಕ ಪುಟ್ಟದೊಂದು ಕೃತಜ್ಞತೆ ಸಲ್ಲಿಸಲೆಂದು ಈ ಹಬ್ಬ ಆಚರಿಸಲಾಗುತ್ತದೆ ಎನ್ನುತ್ತಾರೆ ಕಲಬುರಗಿ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ.
 
ಎಲ್ಲ ಜಾತಿ, ಧರ್ಮೀಯರೂ ಸಾಮೂಹಿಕವಾಗಿ ಪಂಕ್ತಿಯಲ್ಲಿ ಕುಳಿತು ಸಹ ಪಂಕ್ತಿ ಭೋಜನ ಮಾಡಿದರು. ಹಬ್ಬಕ್ಕೆಂದು ಸಿದ್ಧಪಡಿಸಿದ ಶೇಂಗಾ ಹೋಳಿಗೆ, ಭಜಿ ಪಲ್ಯ, ರೊಟ್ಟಿ, ಚಪಾತಿ, ಕಡುಬು ಮತ್ತಿತರ ಖಾದ್ಯಗಳನ್ನು ಸಂಭ್ರಮದಿಂದ ಸವಿದರು. ಹೊಲವಿಲ್ಲದವರೂ ಪಾರ್ಕ್‌ಗಳಿಗೆ ತೆರಳಿ ಸಹ ಪಂಕ್ತಿ ಭೋಜನ ನಡೆಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿಯ ಮೂವತ್ತೆರಡು ಅವತಾರಗಳ ಬಗ್ಗೆ ಗೊತ್ತಾ?