ಊಟ ಮಾಡುವಾಗ ಉಪ್ಪಿನಕಾಯಿ ಇದ್ದರೆನೇ ಚೆಂದ. ಆಗ ಮಾತ್ರ ಊಟ ಸಂಪೂರ್ಣವಾದಂತೆ. ನಾನಾ ತರಹದ ಉಪ್ಪಿನಕಾಯಿಗಳನ್ನು ನಾವು ತಯಾರಿಸಬಹುದು. ಆದರೆ ಈ ಈರುಳ್ಳಿ ಉಪ್ಪಿನಕಾಯಿಯನ್ನು ನಾವು ಎಲ್ಲಾ ಋುತುಮಾನದಲ್ಲಿಯೂ ಮಾಡಬಹುದು. ಹಾಗಾದರೆ ಮಾಡೋದು ಹೇಗೆ ಅಂತ ತಿಳಿಸಿಕೊಡ್ತೀವಿ.. ನೋಡಿ..
ಬೇಕಾಗುವ ಸಾಮಗ್ರಿಗಳು:
* 1/2 ಕೆಜಿ ಈರುಳ್ಳಿ
* ಬೆಳ್ಳುಳ್ಳಿ 100 ಗ್ರಾಂ
* ಹಸಿಮೆಣಸಿನಕಾಯಿ 4 ರಿಂದ 5
* ಮೆಣಸಿನ ಪುಡಿ 2 ಚಮಚ
* ಒಳ್ಳೆಣ್ಣೆ 75 ಮಿ.ಲೀ.
* ಹುಣಸೆಹಣ್ಣಿನ ಗಟ್ಟಿ ರಸ 2 ಚಮಚ
* ಬೆಲ್ಲ (ಒಂದು ಚಿಕ್ಕ ತುಂಡು)
* ಸ್ವಲ್ಪ ಕರ ಬೇವಿನ ಎಲೆ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲು ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಒಂದು ಕಡೆಗೆ ಇಟ್ಟುಕೊಳ್ಳಬೇಕು. ಮತ್ತು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಡಬೇಕು. ನಂತರ 50 ಮಿ.ಲೀ. ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕಡಿಮೆ ಉರಿ ಮಾಡಿ ಅದಕ್ಕೆ ಮೆಣಸಿನ ಪುಡಿ, ಉಪ್ಪು ಹಾಕಿ ಸ್ವಲ್ಪ ಹೊತ್ತು ಸೌಟ್‌ನಿಂದ ತಿರುಗಿಸುತ್ತಾ ಇರಬೇಕು. ಈಗ ಗ್ಯಾಸ್ ಉರಿಯನ್ನು ಸ್ಪಲ್ಪ ಜಾಸ್ತಿ ಮಾಡಿ ಬಾಣಲೆಯಲ್ಲಿರುವ ಮಿಶ್ರಣಕ್ಕೆ ಹುಣಸೆ ಹಣ್ಣಿನ ರಸ ಹಾಕಿ 3 ನಿಮಿಷ ಕುದಿಸಬೇಕು. ನಂತರ ಬೆಲ್ಲವನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಸೇರಿಸಿ ನಂತರ ಚೆನ್ನಾಗಿ ಮಿಶ್ರ ಮಾಡಿ ಸ್ವಲ್ಪ ಹೊತ್ತು ಕಾಯಿಸಬೇಕು. ಉಳಿದ ಎಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣದ ಮೇಲೆ ಸುರಿದು ನಂತರ ಉರಿಯಿಂದ ತೆಗೆದು ಒಂದು ಗಂಟೆ ತಣ್ಣಗಾಗಲು ಇಟ್ಟು ನಂತರ ಡಬ್ಬದಲ್ಲಿ ಮುಚ್ಚಿಟ್ಟರೆ ರುಚಿ ರುಚಿಯಾದ ಗರಿ ಗರಿಯಾದ ಈರುಳ್ಳಿ ಉಪ್ಪಿನಕಾಯಿ ತಿನ್ನಲು ಸಿದ್ಧ. ಇದನ್ನು ಅನ್ನದ ಜೊತೆಗೂ ಸೇರಿಸಿ ತಿನ್ನಬಹುದು.