ನಾನಾ ರೀತಿಯ ದೋಸೆಗಳನ್ನು ನಾವು ತಯಾರಿಸಬಹುದು. ಅದು ಎಲ್ಲಾ ವಯೋಮಾನದವರು ತಿನ್ನಲು ಇಷ್ಟಪಡುತ್ತಾರೆ. ಅಂತಹ ದೋಸೆಗಳ ವಿಧದಲ್ಲಿ ಸಬ್ಬಕ್ಕಿಯನ್ನು ಹಾಕಿ ಮಾಡುವ ದೋಸೆಯು ರುಚಿಕರದ್ದಾಗಿದೆ. ಇದನ್ನು ಸುಲಭವಾಗಿಯೂ ಮಾಡಿ ಸವಿಯಬಹುದು. ಆರೋಗ್ಯದ ಮೇಲೆಯೂ ಈ ದೋಸೆಯು ಒಳ್ಲೆಯ ಪರಿಣಾಮವನ್ನು ನೀಡುತ್ತದೆ. ರಕ್ತದೊತ್ತಡದ ನಿಯಂತ್ರಣಕ್ಕೆ, ಸ್ನಾಯುಗಳ ಬೆಳವಣಿಗೆಗೆ ಸಬ್ಬಕ್ಕಿಯು ಸಹಾಯಕವಾಗಿದೆ. ಹಾಗಾದರೆ ಇದರಿಂದ ದೋಸೆಯನ್ನು ಹೇಗೆ ತಯಾರಿಸಬಹುದು ಎಂದು ನೋಡೋಣ ಬನ್ನಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಸಬ್ಬಕ್ಕಿ 1/2 ಕಪ್
* ಅಕ್ಕಿ ಹುಡಿ 1/2 ಕಪ್
* ಮೊಸರು 1/3 ಕಪ್
* ಹಸಿಮೆಣಸು 2 ರಿಂದ 3
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಈರುಳ್ಳಿ 2
* ತುರಿದ ಕ್ಯಾರೆಟ್ 1 ಕಪ್
* ತೆಂಗಿನಕಾಯಿ ತುರಿ 1/2 ಕಪ್
* ಉಪ್ಪು, ತುಪ್ಪ, ಎಣ್ಣೆ
ತಯಾರಿಸುವ ವಿಧಾನ :
ಮೊದಲು ಸಬ್ಬಕ್ಕಿಯನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಚೆನ್ನಾಗಿ ತೊಳೆದು ಅದಕ್ಕೆ ಮೊಸರು, ಅಕ್ಕಿಹಿಟ್ಟು, ತೆಂಗಿನತುರಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಕೊಳ್ಳಬೇಕು. ನಂತರ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕರಿಬೇವು ಮತ್ತು ಕ್ಯಾರೆಟ್ ತುರಿಯನ್ನು ಹಾಕಿ ಮಿಶ್ರಣ ಮಾಡಬೇಕು. ದೋಸೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು. ನಂತರ ಅದಕ್ಕೆ ತಕ್ಕಂತೆ ನೀರನ್ನು ಸೇರಿಸಬೇಕು. ನಂತರ ಸ್ಟೌವ್ ಮೇಲೆ ತವಾ ಇಟ್ಟು ಅದು ಕಾದ ಮೇಲೆ ದೋಸೆ ಹಿಟ್ಟನ್ನು ಹುಯ್ದು ಹರಡಬೇಕು. ಹೊಯ್ದ ದೋಸೆಯನ್ನು 3 ರಿಂದ 4 ನಿಮಿಷಗಳ ಕಾಲ ಬೇಯಿಸಬೇಕು. ಆಮೇಲೆ ಸ್ವಲ್ಪ ತುಪ್ಪವನ್ನು ಸವರಬೇಕು. ಸಿದ್ಧವಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಬಹುದು.