ಕರ್ನಾಟಕದಲ್ಲಿ ಪುಳಿಯೊಗರೆಯನ್ನು ಹೆಚ್ಚಾಗಿ ಬೆಳಗಿನ ತಿಂಡಿಗೆ ಮಾಡುತ್ತಾರೆ. ಹಬ್ಬದ ದಿನಗಳಲ್ಲಿ ಊಟದಲ್ಲಿ ಮತ್ತು ಕೆಲವು ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿಯೂ ಸಹ ಪುಳಿಯೊಗರೆಯನ್ನು ಮಾಡುತ್ತಾರೆ. ಹುಳಿ, ಸಿಹಿ ಮತ್ತು ಖಾರದ ಮಿಶ್ರಣವಾದ ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಸರಳವಾಗಿ ಪುಳಿಯೊಗರೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಅನ್ನ - 2 ಕಪ್
ಹುಣಿಸೆಹಣ್ಣು - 1 ನಿಂಬೆಗಾತ್ರ
ಕರಿಬೇವು - ಒಂದು ಹಿಡಿ
ಎಣ್ಣೆ - 1/4 ಕಪ್
ದನಿಯಾ - 1 ಚಮಚ
ಉದ್ದಿನಬೇಳೆ - 2-3 ಚಮಚ
ಕಡಲೆ ಬೇಳೆ - 2-3 ಚಮಚ
ಮೆಣಸಿನಕಾಳು - 1 ಚಮಚ
ಒಣಮೆಣಸು - 4-5
ಬಿಳಿಎಳ್ಳು - 1 ಚಮಚ
ಮೆಂತೆ - 1/2 ಚಮಚ
ಸಾಸಿವೆ - 1 ಚಮಚ
ಶೇಂಗಾ - 3-4 ಚಮಚ
ಇಂಗು - 1/2 ಚಮಚ
ಬೆಲ್ಲ - 1-2 ಚಮಚ
ಉಪ್ಪು - ರುಚಿಗೆ
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ದನಿಯಾ, ಮೆಂತೆ, ಮೆಣಸಿನಕಾಳು, 2 ಚಮಚ ಕಡಲೆ ಬೇಳೆ ಮತ್ತು 2 ಚಮಚ ಉದ್ದಿನ ಬೇಳೆಯನ್ನು ಹಾಕಿ ಸ್ವಲ್ಪ ಹುರಿದು ನಂತರ ಎಳ್ಳು ಮತ್ತು 3-4 ಕೆಂಪು ಮೆಣಸನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಹುರಿದ ಸಾಮಗ್ರಿಗಳು ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ ಪುಳಿಯೊಗರೆ ಪುಡಿಯನ್ನು ತಯಾರಿಸಿಕೊಳ್ಳಿ. ಹುಣಿಸೆ ಹಣ್ಣನ್ನು 1/2 ಕಪ್ ನೀರಿನಲ್ಲಿ ನೆನೆಸಿ ಅದರ ರಸವನ್ನು ಬೇರ್ಪಡಿಸಿಕೊಳ್ಳಿ.
ಪ್ಯಾನ್‌ನಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಸಾಸಿವೆ, 1/2 ಚಮಚ ಉದ್ದಿನ ಬೇಳೆ, 1/2 ಚಮಚ ಕಡಲೆಬೇಳೆ, ಶೇಂಗಾ ಮತ್ತು ಒಂದು ಮೆಣಸನ್ನು ಹಾಕಿ 1 ನಿಮಿಷ ಹುರಿಯಿರಿ. ಅದಕ್ಕೆ ಕರಿಬೇವು ಮತ್ತು ಇಂಗನ್ನು ಹಾಕಿ ಉದ್ದಿನಬೇಳೆ ಕೆಂಪಗಾಗುವವರೆಗೆ ಹುರಿದು ಅದಕ್ಕೆ ಹುಣಿಸೆ ಹಣ್ಣಿನ ರಸವನ್ನು ಸೇರಿಸಿ. ನಂತರ ಇದಕ್ಕೆ ರುಚಿಗೆತಕ್ಕಷ್ಟು ಉಪ್ಪು, ಬೆಲ್ಲ ಮತ್ತು 1/2 ಚಮಚ ಅರಿಶಿಣವನ್ನು ಹಾಕಿ 5-6 ನಿಮಿಷ ಕುದಿಸಿ. ನೀರು ಆವಿಯಾಗಿ ಈ ಮಿಶ್ರಣವು ದಪ್ಪವಾಗುತ್ತಾ ಬಂದಂತೆ ಅದಕ್ಕೆ ಈ ಮೊದಲೇ ಮಾಡಿಟ್ಟುಕೊಂಡ 2 ಚಮಚ ಪುಳಿಯೊಗರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದಲ್ಲಿನ ಎಣ್ಣೆಯು ಬೇರ್ಪಡುತ್ತಾ ಬಂದಂತೆ ಅದಕ್ಕೆ ಅನ್ನವನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಪುಳಿಯೊಗರೆ ರೆಡಿಯಾಗುತ್ತದೆ. ನೀವೂ ಒಮ್ಮೆ ಮಾಡಿ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.