ಚಿರೋಟಿಯು ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಕಂಡುಬರುವ ತಿನಿಸಾಗಿದೆ. ಹೆಚ್ಚಾಗಿ ಮದುವೆ, ಗೃಹಪ್ರವೇಶದಂತಹ ವಿಶೇಷವಾದ ಸಂದರ್ಭಗಳಲ್ಲಿ ಇದನ್ನು ಮಾಡುತ್ತಾರೆ. ಸಿಹಿಯನ್ನು ಅಷ್ಟಾಗಿ ಇಷ್ಟಪಡದವರೂ ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ನಿಮಗೆ ಸ್ವಲ್ಪ ಸಮಯವಿದ್ದರೆ ನೀವೇ ಈ ರುಚಿಯಾದ ತಿನಿಸನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ - 2 ಕಪ್
ಬೆಣ್ಣೆ - 1/2 ಕಪ್
ಅಕ್ಕಿ ಹಿಟ್ಟು - ಸ್ವಲ್ಪ
ಮೈದಾ ಹಿಟ್ಟು - ಸ್ವಲ್ಪ
ಸಕ್ಕರೆ ಪುಡಿ - ಸ್ವಲ್ಪ
ಬಾದಾಮಿ - ಸ್ವಲ್ಪ
ಮಾಡುವ ವಿಧಾನ:
ಒಂದು ಬೌಲ್‌ಗೆ 2 ಕಪ್ ರವೆಯನ್ನು ಹಾಕಿ 2-3 ಚಮಚ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ 3/4 ಕಪ್ ನೀರು, ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ನಾದಿ ಹಿಟ್ಟಿನ ಉಂಡೆಯನ್ನು ರೆಡಿ ಮಾಡಿ 30 ನಿಮಿಷ ಹಾಗೆಯೇ ಬಿಡಿ. ಒಂದು ಚಿಕ್ಕ ಬೌಲ್‌ನಲ್ಲಿ 3-4 ಚಮಚ ಬೆಣ್ಣೆ ಮತ್ತು 2-3 ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ನಂತರ ಹಿಟ್ಟನ್ನು ಸ್ವಲ್ಪ ದೊಡ್ಡದಾದ ಉಂಡೆಗಳನ್ನಾಗಿ ಮಾಡಿಕೊಂಡು ಮೈದಾ ಹಿಟ್ಟಿನಲ್ಲಿ ಹೊರಳಿಸಿ ದೊಡ್ಡದಾದ ಚಪಾತಿಗಳಂತೆ ಲಟ್ಟಿಸಿಕೊಳ್ಳಿ. ಹೀಗೆ ಲಟ್ಟಿಸಿಕೊಂಡ ಚಪಾತಿಯ ಮೇಲೆ ಒಂದು ಚಮಚ ಬೆಣ್ಣೆಯನ್ನು ಸವರಿ ಅದರ ಮೇಲೆ ಇನ್ನೊಂದು ಚಪಾತಿಯನ್ನು ಹಾಕಿ. ಮತ್ತೆ ಇದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಸವರಿ ಇನ್ನೊಂದು ಚಪಾತಿಯನ್ನು ಹಾಕಿ. ಹೀಗೆಯೇ 4-5 ಲೇಯರ್‌ಗಳವರೆಗೆ ಮಾಡಿ. ನಂತರ ಇದನ್ನು ಸರಿಯಾಗಿ ಸುರುಳಿಯನ್ನಾಗಿ ಮಾಡಿಕೊಂಡು ಚಾಕುವಿನಿಂದ ಒಂದೊಂದು ಇಂಚಾಗಿ ಕತ್ತರಿಸಿ. ಈಗ ಅವುಗಳನ್ನು ಮೇಲ್ಮುಖವಾಗಿ ಇರಿಸಿಕೊಂಡು ತಟ್ಟಿ ಮಧ್ಯಮ ಉರಿಯಲ್ಲಿ ಕಾದ ಎಣ್ಣೆಯಲ್ಲಿ ಕರಿದುಕೊಳ್ಳಿ. ನಂತರ ಅವುಗಳ ಮೇಲೆ ಸಕ್ಕರೆ ಪುಡಿಯನ್ನು ಮತ್ತು ತರಿತರಿಯಾದ ಬಾದಾಮಿ ಪುಡಿಯನ್ನು ಉದುರಿಸಿಕೊಂಡರೆ ರುಚಿಯಾದ ಚಿರೋಟಿ ಸಿದ್ಧವಾಗುತ್ತದೆ. ಬಾದಾಮಿ ಹಾಲಿನೊಂದಿಗೆ ಇದು ಚೆನ್ನಾಗಿರುತ್ತದೆ.