ಜಿಲೇಬಿ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಎಲ್ಲರೂ ಇಷ್ಟ ಪಟ್ಟು ತಿನ್ನುವಂತಹ ತಿನಿಸು ಕೂಡ ಇದಾಗಿದೆ.
ಸಿಹಿಯ ರಾಜ ಎಂದು ಕರೆದರೂ ತಪ್ಪಾಗಲಾರದು. ಈ ಸಿಹಿಯನ್ನು ತಪ್ಪದೇ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ರುಚಿಕರವಾದ ಹಾಗೂ ಕೆಲವೇ ನಿಮಿಷಗಳಲ್ಲಿ ಜಿಲೇಬಿ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು
•ಸಕ್ಕರೆ- 1.5 ಬಟ್ಟಲು
•ಮೈದಾ ಹಿಟ್ಟು-2 ಬಟ್ಟಲು
•ಮೊಸರು-1 ಬಟ್ಟಲು
•ಬೇಕಿಂಗ್ ಸೋಡಾ- ಸ್ವಲ್ಪ
•ಕೇಸರಿ ದಳ-15-20
•ಹಾಲು- ಒಂದು ಸಣ್ಣ ಬಟ್ಟಲು
•ನಿಂಬೆ ರಸ- ಸ್ವಲ್ಪ
•ಏಲಕ್ಕಿ ಪುಡಿ- ಸ್ವಲ್ಪ
•ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು
•ಸಾಸ್ ಬಾಟಲಿ- 1 ಮಾಡುವ ವಿಧಾನ...
•ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ 1.5 ಬಟ್ಟಲು ಸಕ್ಕರೆ ಹಾಗೂ 1 ಬಟ್ಟಲು ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.
•ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
•ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧ.