ದಕ್ಷಿಣ ಭಾರತದಲ್ಲಿ ಬೆಳಗಿನ ಉಪಹಾರವಾಗಿ ಹೆಚ್ಚಾಗಿ ಬಳಸುವ ತಿಂಡಿಗಳಲ್ಲಿ (ನಾಷ್ಟಾ) ಇದು ಕೂಡಾ ಒಂದು. ಇದು ಪ್ರಪಂಚದ ರುಚಿಕರ ಆಹಾರ ಪದಾರ್ಥಗಳಲ್ಲಿ ಇದು 50 ನೇ ಸ್ಥಾನ ಪಡೆದಿದೆ ಯಾವುದಪ್ಪಾ ಇದು ಅಂತ ತಿಳಿಯುವ ಬಯಕೆ ನಿಮಗಿದೆಯೇ ಇಲ್ಲಿದೆ ಮಾಹಿತಿ.
ದೋಸೆ ಇದನ್ನು ಪ್ರತಿ ಮನೆಗಳಲ್ಲೂ ಬೆಳಗಿನ ತಿಂಡಿಯಾಗಿ ಸಾಮಾನ್ಯವಾಗಿ ಬಳಸುತ್ತಾರೆ ಅದರಲ್ಲೂ ವಿಭಿನ್ನವಾದ ದೋಸೆಗಳಿದ್ದರೆ ತಿನ್ನಲು ಆಸೆಯಾಗುವುದಂತು ಸುಳ್ಳಲ್ಲ ಆದರೆ ಅದನ್ನು ತಯಾರಿಸಲು ಸಮಯ ಬೇಕು. ಆದರೆ ಅತೀ ಕಡಿಮೆ ಸಮಯದಲ್ಲಿ ಶೀಘ್ರ ಮತ್ತು ರುಚಿಕರ ದೋಸೆಯನ್ನು ತಯಾರಿಸಬಹುದು ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ
1. ಓಟ್ಸ್ ದೋಸೆ
ಬೇಕಾಗುವ ಸಾಮಗ್ರಿ-
ಓಟ್ಸ್ - 1 ಕಪ್.
ಅಕ್ಕಿ ಹಿಟ್ಟು - 1/4 ಕಪ್.
ರವಾ -1/4 ಕಪ್.
ಮೊಸರು - 2 ಟೀ ಚಮಚ
ಕೊತ್ತಂಬರಿ ಸೋಪ್ಪು
ಜೀರಿಗೆ - 1 ಟೀ ಚಮಚ
ಉಪ್ಪು - ರುಚಿಗೆ.
ಶುಂಠಿ - 1 ಇಂಚು (ಸಣ್ಣದಾಗಿ ಹೆಚ್ಚಿದ)
ಹಸಿಮೆಣಸು - 1
ಮಾಡುವ ವಿಧಾನ-
ಓಟ್ಸ್ ಅನ್ನು ಸುವಾಸನೆ ಬರುವ ತನಕ 3-4 ನಿಮಿಷಗಳ ಕಾಲ ಹುರಿದಿಟ್ಟುಕೊಳ್ಳಿ. ಇದರ ಬಿಸಿ ಆರಿದ ಮೇಲೆ ಅದನ್ನು ಪುಡಿ ಮಾಡಿ. ಪುಡಿ ಮಾಡಿದ ಓಟ್ಸ್ ಅನ್ನು, ಅಕ್ಕಿ ಹಿಟ್ಟು, ರವಾ, ಜೀರಿಗೆ, ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಶುಂಠಿ, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಮೊಸರು ಸೇರಿಸಿ ಬೆರೆಸಿಕೊಳ್ಳಿ. 1 1/2 -2 ಕಪ್ ನೀರು ಸೇರಿಸಿ ಚೆನ್ನಾಗಿ ತಿರುವಿರಿ ನಂತರ ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ , ಗರಿಗರಿ ಮತ್ತು ರುಚಿಕರ ಓಟ್ಸ್ ದೋಸೆ ಸವಿಯಲು ಸಿದ್ಧ.
2. ಮೈದಾ ದೋಸೆ
ಬೇಕಾಗುವ ಸಾಮಗ್ರಿ-
ಮೈದಾ ಹಿಟ್ಟು - 1 ಕಪ್.
ಅಕ್ಕಿ ಹಿಟ್ಟು - 1/2 ಕಪ್.
ಉಪ್ಪು - ರುಚಿಗೆ ತಕ್ಕಷ್ಟು.
ಒಗ್ಗರಣೆ ಸೊಪ್ಪು
ಹಸಿಮೆಣಸು - 2 (ಸಣ್ಣಗೆ ಹೆಚ್ಚಿದ)
ಕೊತ್ತಂಬರಿ ಸೊಪ್ಪು
ಜೀರಿಗೆ - 1 ಚಮಚ
ಮಾಡುವ ವಿಧಾನ-ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಅದಕ್ಕೆ ಬೇಕಾಗುವಷ್ಟು ನೀರು ಬೆರಸಿ ಚೆನ್ನಾಗಿ ಕದಡಿಕೊಳ್ಳಿ 5 ನಿಮಿಷಗಳ ಕಾಲ ಹಾಗೇ ಬಿಡಿ ನಂತರ ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ ಗರಿ ಗರಿ ಮೈದಾ ದೋಸೆ ರೆಡಿ.
ಬೇಕಾಗುವ ಸಾಮಗ್ರಿ-
ರವಾ - 1 ಕಪ್.
ಮೈದಾ ಹಿಟ್ಟು - 1/4 ಕಪ್.
ಅಕ್ಕಿ ಹಿಟ್ಟು - 1/4 ಕಪ್.
ಮೊಸರು - (1 ಕಪ್ + 2 ಕಪ್ ನೀರು)
ಕೊತ್ತಂಬರಿ ಸೋಪ್ಪು
ಹಸಿಮೆಣಸು - 2 (ಸಣ್ಣಗೆ ಹೆಚ್ಚಿದ)
ಸ್ವಲ್ಪ ಶುಂಠಿ
ಉಪ್ಪು
ಮಾಡುವ ವಿಧಾನ-
ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಅದಕ್ಕೆ ಬೇಕಾಗುವಷ್ಟು ನೀರು ಬೆರಸಿ, ಚೆನ್ನಾಗಿ ಕದಡಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಪಕ್ಕಕ್ಕಿಡಿ ನಂತರ ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ ರುಚಿಕರವಾದ ರವಾ ದೋಸೆ ರೆಡಿ.
4. ಕಾಯಿ ದೋಸೆ
ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ (ದೋಸೆ ಅಕ್ಕಿ, ಇಲ್ಲದಿದ್ದರೆ ಯಾವುದೇ ಸಾಮಾನ್ಯ ಬೇಯಿಸದ ಅಕ್ಕಿ)
3/4 ಕಪ್ ತೆಂಗಿನಕಾಯಿ ತುರಿ
ಉಪ್ಪು
ಮಾಡುವ ವಿಧಾನ-
ರಾತ್ರಿಯಿಡಿ ನೆನೆಸಿಟ್ಟ ಅಕ್ಕಿಗೆ ತೆಂಗಿನಕಾಯಿ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ತಿರುವಿರಿ ನಂತರ ಕಾದ ತವಾ ಮೇಲೆ ಎಣ್ಣೆಯನ್ನು ಸವರಿ, ರುಬ್ಬಿದ ಹಿಟ್ಟು ಹಾಕಿ ಒಂದು ಭಾಗ ಮಾತ್ರ ಬೇಯಿಸಿದರೆ ಕಾಯಿ ದೋಸೆ ಸವಿಯಲು ಸಿದ್ಧ.
5. ರಾಗಿ ದೋಸೆ
ಬೇಕಾಗುವ ಸಾಮಗ್ರಿ-
ರಾಗಿ ಹಿಟ್ಟು - 1 ಕಪ್
ಮೊಸರು - ½ ಕಪ್
ತೆಂಗಿನಕಾಯಿ - ½ ಕಪ್
ಜೀರಿಗೆ - 1 ಚಮಚ
ಕರಿ ಮೆಣಸು - 1 ಚಮಚ
ಒಗ್ಗರಣೆ ಸೋಪ್ಪು
ಉಪ್ಪು
ಮಾಡುವ ವಿಧಾನ-
ಒಂದು ಪಾತ್ರೆಯಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಅದಕ್ಕೆ ಬೇಕಾಗುವಷ್ಟು ನೀರು ಬೆರೆಸಿ ಚೆನ್ನಾಗಿ ತಿರುವಿರಿ ನಂತರ ಕಾದ ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ , ಗರಿಗರಿ ರಾಗಿ ದೋಸೆ ರೆಡಿ.
6.ಈರುಳ್ಳಿ ರವಾ ದೋಸೆ-
ಬೇಕಾಗುವ ಸಾಮಗ್ರಿ-
ರವಾ - 1 ಕಪ್.
ಅಕ್ಕಿ ಹಿಟ್ಟು - 1/2 ಕಪ್.
ಈರುಳ್ಳಿ - 1/4 ಕಪ್ (ಚಿಕ್ಕದಾಗಿ ಕತ್ತರಿಸಿದ)
ಕೊತ್ತಂಬರಿ ಸೋಪ್ಪು
ಹಸಿಮೆಣಸು - 2. (ಸಣ್ಣಗೆ ಹೆಚ್ಚಿದ)
ಸ್ವಲ್ಪ ಶುಂಠಿ (ಸಣ್ಣದಾಗಿ ಹೆಚ್ಚಿದ)
ಕರಿ ಮೆಣಸು - 1 ಚಮಚ
ಉಪ್ಪು
ಮಾಡುವ ವಿಧಾನ-
ಒಂದು ಪಾತ್ರೆಯಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಪಕ್ಕಕ್ಕಿಡಿ
ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ , ಈರುಳ್ಳಿ ದೋಸೆ ತಿನ್ನಲು ಸಿದ್ಧ.
7.ಗೋಧಿ ದೋಸೆ
ಬೇಕಾಗುವ ಸಾಮಗ್ರಿ-
ಗೋಧಿ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 3/4 ಕಪ್.
ಹುಳಿ ಮಜ್ಜಿಗೆ - 1/4 ಕಪ್
ಹಸಿಮೆಣಸು - 2 (ಸಣ್ಣದಾಗಿ ಹೆಚ್ಚಿದ)
ಎಣ್ಣೆ-1 ಚಮಚ
ಸಾಸಿವೆ - 1/2 ಚಮಚ
ಜೀರಿಗೆ - 1/2 ಚಮಚ
ಒಗ್ಗರಣೆ ಸೋಪ್ಪು
ಉಪ್ಪು
ಮಾಡುವ ವಿಧಾನ-
ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಹುಳಿ ಮಜ್ಜಿಗೆ, ಹಸಿಮೆಣಸು, ಉಪ್ಪು ಬೇಕಾಗುವಷ್ಟು ನೀರು ಸೇರಿಸಿ, ಚೆನ್ನಾಗಿ ಕದಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಗ್ಗರಣೆ ಸೋಪ್ಪು ಹಾಕಿ, ಒಗ್ಗರಣೆ ತಯಾರಿಸಿ. ಮೊದಲೆ ತಯಾರಿಸಿಟ್ಟುಕೊಂಡ ಹಿಟ್ಟಿಗೆ ಈ ಒಗ್ಗರಣೆ ಸೇರಿಸಿ ನಂತರ ತವಾಗೆ ಎಣ್ಣೆ ಸವರಿ, ಹಿಟ್ಟು ಸುರಿದು, ಎರಡೂ ಕಡೆ ಬೇಯಿಸಿದರೆ , ಗರಿಗರಿ ಮತ್ತು ರುಚಿಕರ ಈರುಳ್ಳಿ ಗೋಧಿ ದೋಸೆ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.