ಊಟದ ಸಮಯದಲ್ಲಿ ಉಪ್ಪಿಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆಬಗೆಯ ಚಟ್ನಿಪುಡಿಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇಂತಹ ಹುಣಸೇ ಚಿಗುರಿನ ಚಟ್ನಿಪುಡಿ ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಒಣಗಿಸಿದ ಹುಣಸೆ ಚಿಗುರು ಎರಡು ದೊಡ್ಡ ಬಟ್ಟಲು.
ಕಡಲೆ ಬೇಳೆ ಅರ್ಧ ಪಾವು
ಉದ್ದಿನ ಬೇಳೆ ಕಾಲು ಪಾವು
ಮೆಂತ್ಯ ಅರ್ಧ ಚಮಚ
ಜೀರಿಗೆ ಒಂದು ಚಮಚ
ಕಾಳುಮೆಣಸು ಹದಿನೈದು
ಕೊಬ್ಬರಿ ತುರಿ ಒಂದು ಕಪ್
ಒಣಮೆಣಸಿನಕಾಯಿ ಇಪ್ಪತ್ತು/ಖಾರ ಎಷ್ಟು ಬೇಕು ಅಷ್ಟು
ಇಂಗು ಕಾಲು ಚಮಚ
ಬೆಲ್ಲ ನಿಂಬೆ ಗಾತ್ರದಷ್ಟು
ಕಲ್ಲುಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಮೂರು ಚಮಚ ಹುರಿಯಲು.
ತಯಾರಿಸುವ ವಿಧಾನ:
ಮೊದಲು ಒಣಗಿಸಿದ ಹುಣಸೆ ಚಿಗುರನ್ನು ಬಾಣಲೆಯಲ್ಲಿ ಬಿಸಿ ಮಾಡಿ ಕೊಂಡು ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಹುರಿದು ಕೊಳ್ಳಿ.ತಟ್ಟೆಯಲ್ಲಿ ತೆಗೆದಿಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಡಲೆಬೇಳೆ, ಉದ್ದಿನ ಬೇಳೆ, ಮೆಂತ್ಯ, ಜೀರಿಗೆ ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಬೆಳ್ಳುಳ್ಳಿ ಜೊತೆಗೆ ಸೇರಿಸಿ ಹುರಿಯಿರಿ. ನಂತರ ಒಣಮೆಣಸಿನಕಾಯಿ ಹಾಕಿ ಹುರಿಯಿರಿ.
ಒಣಮೆಣಸಿನಕಾಯಿ ಬಿಸಿಯಾಗುತ್ತಾ ಬರುವಾಗ ಒಣಕೊಬ್ಬರಿ ಸೇರಿಸಿ ಮಿಶ್ರಣ ಮಾಡಿ.ಬಾಣಲೆ ಬಿಸಿಗೆ ಬೆಚ್ಚಗಾದರೆ ಸಾಕು. ಕಲ್ಲುಪ್ಪು,ಇಂಗು ಹಾಕಿ ಮಿಶ್ರಣ ಮಾಡಿ. ಬೆಲ್ಲವನ್ನು ಸೇರಿಸಿ. ಬೆಲ್ಲ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳಿ.ಮಕ್ಕಳು ಇಷ್ಟ ಪಡುತ್ತಾರೆ. ಈ ಎಲ್ಲಾ ಪದಾರ್ಥಗಳನ್ನು ಸಣ್ಣ ಉರಿಯಲ್ಲಿ ನಿದಾನವಾಗಿ ಒಂದಾದ ಮೇಲೊಂದು ಹಾಕುತ್ತಾ ಹುರಿಯುತ್ತಾ ಬಂದರೆ ಯಾವುದು ಸೀದು ಹೋಗುವುದಿಲ್ಲ. ಕೊನೆಯಲ್ಲಿ ಒಲೆಯನ್ನು ಆರಿಸಿ ಹುರಿದು ಕೊಂಡ ಹುಣಸೆ ಚಿಗುರನ್ನು ಮಿಶ್ರಣ ಮಾಡಿ.
ಎಲ್ಲಾ ಆರಿದ ನಂತರ ಮಿಕ್ಸಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಪುಡಿ ಮಾಡಿ ಕೊಳ್ಳಿ.
ಒಮ್ಮೆ ಪುಡಿ ಮಾಡಿದ ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಪುನಃ ಇನ್ನೊಮ್ಮೆ ಪುಡಿ ಮಾಡಿ ಕೊಳ್ಳಿ. ನಂತರ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ.
ಈ ಚಟ್ನಿ ಪುಡಿಯನ್ನು ಸರಿಯಾಗಿ ಸೇಕರಿಸಿಟ್ಟರೆ ಆರು ತಿಂಗಳು ಹಾಳಾಗದಂತೆ ಇಡಬಹುದು.
ರುಚಿಯಾದ ಚಟ್ನಿ ಪುಡಿ ತಯಾರಿಸಿ ಸವಿಯಿರಿ