Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಡಾ ಕರಿ ಮಾಡಿ ಸವಿಯಿರಿ..

ವಡಾ ಕರಿ ಮಾಡಿ ಸವಿಯಿರಿ..
ಬೆಂಗಳೂರು , ಶುಕ್ರವಾರ, 15 ಮಾರ್ಚ್ 2019 (15:33 IST)
ಎಣ್ಣೆಯಲ್ಲಿ ಕರಿದ ವಡೆಗಳನ್ನು ಟೊಮಾಟೋ ಮತ್ತು ಈರುಳ್ಳಿ ಗ್ರೇವಿಯೊಂದಿಗೆ ಸೇರಿಸಿ ಮಾಡುವ ವಡಾ ಕರಿ ಹಲವು ಮಸಾಲೆಗಳ ಮಿಶ್ರಣವಾಗಿದೆ. ಇದು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದ್ದು ಪೂರಿ, ದೋಸೆ, ಇಡ್ಲಿ ಜೊತೆಗೆ ಕೂಡುತ್ತಾರೆ. ನೋಡಲು ಹಾಗೂ ರುಚಿ ಬಹುತೇಕ ಇತರ ದಕ್ಷಿಣ ಭಾರತದ ತರಕಾರಿಯ ಕುರ್ಮಾದ ಹಾಗೆ ಇದ್ದರೂ ಸಹ ಇದರ ಮಾಡುವ ವಿಧಾನವೇ ತುಂಬಾ ವಿಶಿಷ್ಟವಾಗಿದೆ.
ಬೇಕಾಗುವ ಸಾಮಗ್ರಿಗಳು:
ಕಡಲೆ ಬೇಳೆ - 1 ಕಪ್
ಸೋಂಪು - 1 ಚಮಚ
ಹಸಿ ಮೆಣಸು - 2-3
ಜೀರಿಗೆ - 1/2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿಬೇವು - ಸ್ವಲ್ಪ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಲವಂಗದ ಎಲೆ - ಒಂದು ಚೂರು
ಚೆಕ್ಕೆ - ಒಂದು ಚಿಕ್ಕ ಚೂರು
ಏಲಕ್ಕಿ - 2
ಲವಂಗ - 2-3
ಇಂಗು - ಸ್ವಲ್ಪ
ಅರಿಶಿಣ - 1/2 ಚಮಚ
ಅಚ್ಚಖಾರದ ಪುಡಿ - 1/2 ಚಮಚ
ದನಿಯಾ ಪುಡಿ - 1/2 ಚಮಚ
ಟೊಮ್ಯಾಟೋ - 1
ಈರುಳ್ಳಿ - 1-2
ಕಾಯಿ ಹಾಲು - 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
 
ಮಾಡುವ ವಿಧಾನ:
ಒಂದು ಕಪ್ ಕಡಲೆ ಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ಅದನ್ನು ಸೋಸಿ ಮಿಕ್ಸಿ ಜಾರ್‌ಗೆ ಹಾಕಿ. ಈಗ ಅದಕ್ಕೆ ಒಂದು ಹಸಿಮೆಣಸು, ಅರ್ಧ ಚಮಚ ಸೋಂಪು, ಅರ್ಧ ಚಮಚ ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಕರಿದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಡಿ.
 
ಒಂದು ಪ್ಯಾನ್ ಅನ್ನು ಸ್ಟೌಮೇಲಿಟ್ಟು 2-3 ಚಮಚ ಎಣ್ಣೆಯನ್ನು ಹಾಕಿ ಕಾದ ನಂತರ ಸಣ್ಣ ಉರಿಯಲ್ಲಿ ಅದಕ್ಕೆ ಲವಂಗದ ಎಲೆ, ಚೆಕ್ಕೆ, ಲವಂಗ, ಏಲಕ್ಕಿ, 1/2 ಚಮಚ ಸೋಂಪು, ಸ್ವಲ್ಪ ಇಂಗನ್ನು ಹಾಕಿ ಸ್ವಲ್ಪ ಹುರಿಯಿರಿ. ಹುರಿದ ಪರಿಮಳ ಬರಲು ಆರಂಭಿಸಿದಾಗ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷ ಹುರಿಯಿರಿ. ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1-2 ಕತ್ತರಿಸಿದ ಹಸಿ ಮೆಣಸು ಮತ್ತು ಕರಿಬೇವನ್ನು ಸೇರಿಸಿ ಹುರಿಯಿರಿ. ಈರುಳ್ಳಿಯ ಬಣ್ಣ ಸ್ವಲ್ಪ ಕೆಂಪಾದಾಗ ಅದಕ್ಕೆ ಅರಿಶಿಣ, ಅಚ್ಚಖಾರದ ಪುಡಿ, ದನಿಯಾ ಪುಡಿ, 1/2 ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿದ ಟೊಮೆಟೋವನ್ನು ಸೇರಿಸಿ ಅದು ಚೆನ್ನಾಗಿ ಬೇಯುವವರೆಗೂ ಹುರಿಯುತ್ತಿರಿ. ಟೊಮೆಟೋ ಚೆನ್ನಾಗಿ ಬೆಂದ ನಂತರ ಅದಕ್ಕೆ 1 ಕಪ್ ನೀರು ಮತ್ತು 1/2 ಕಪ್ ಕಾಯಿ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ 5 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ. 5 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಸರಿಯಾದ ಹದಕ್ಕೆ ಬಂದಾಗ ಈಗಾಗಲೇ ಕರಿದಿಟ್ಟ ವಡೆಯ ಚೂರುಗಳನ್ನು ಮಸಾಲೆಗೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ 3-4 ನಿಮಿಷ ಮುಚ್ಚಿ ಕುದಿಸಿದರೆ ರುಚಿಯಾದ ವಡಾ ಕರಿ ಸಿದ್ದವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಮಸಾಲಾ ಮಜ್ಜಿಗೆ