ಯಾವಾಗಲೂ ಚಪಾತಿಯೊಂದಿಗೆ ಪಲ್ಯ ಮತ್ತು ಚಟ್ನಿಯನ್ನು ಮಾಡಿಕೊಂಡು ತಿಂದು ಬೇಸರವಾಗಿದ್ದರೆ ಒಮ್ಮೆ ತರಕಾರಿಗಳ ಸಾಗು ಮಾಡಿ ರುಚಿ ನೋಡಿ. ಸರಿಹೊಂದುವ ಯಾವುದೇ ತರಕಾರಿಗಳನ್ನು ನೀವು ಇದರಲ್ಲಿ ಬಳಸಬಹುದು. ಹಲವು ಪೌಷ್ಟಿಕಾಂಶಗಳನ್ನು ಒದಗಿಸುವುದರೊಂದಿಗೆ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾದುದಾಗಿದೆ. ಸಾಗು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ - 1
ಬೀನ್ಸ್ - 8-10
ಬಟಾಟೆ - 2
ಹೂಕೋಸು - 1/4 ಕಪ್
ಹಸಿರು ಬಟಾಣಿ - 1/2 ಕಪ್
ಕಾಯಿತುರಿ - 1/2 ಕಪ್
ಹಸಿಮೆಣಸು - 2
ದನಿಯಾ - 2 ಚಮಚ
ಜೀರಿಗೆ - 1/2 ಚಮಚ
ಚೆಕ್ಕೆ - 2 ಇಂಚು
ಲವಂಗ - 2
ಕಾಳುಮೆಣಸು - 4-5
ಸಾಸಿವೆ - 1/2 ಚಮಚ
ಉದ್ದಿನಬೇಳೆ - 2 ಚಮಚ
ಕರಿಬೇವು - ಸ್ವಲ್ಪ
ಎಣ್ಣೆ - 6-7 ಚಮಚ
ಮಾಡುವ ವಿಧಾನ:
ಹಸಿರು ಬಟಾಣಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಬಟಾಟೆ, ಹೂಕೋಸು, ಕ್ಯಾರೆಟ್ ಅನ್ನು ಹೆಚ್ಚಿಕೊಳ್ಳಿ. ಹೆಚ್ಚಿದ ತರಕಾರಿಗಳೊಂದಿಗೆ ನೆನೆಸಿದ ಬಟಾಣಿಯನ್ನು ಸೇರಿಸಿ ಬೇಯಲು ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಒಂದರಿಂದ ಎರಡು ಸೀಟಿಯನ್ನು ಹಾಕಿಸಿ.
ಮಿಕ್ಸಿ ಜಾರ್‌ಗೆ ಕಾಯಿತುರಿ, ಚೆಕ್ಕೆ, ಲವಂಗ, ದನಿಯಾ, ಜೀರಿಗೆ, ಕಾಳುಮೆಣಸು, 2 ಹಸಿಮೆಣಸು ಮತ್ತು ಹುರಿದ ಉದ್ದಿನಬೇಳೆ 1 ಚಮಚ ಹಾಕಿ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
ಒಂದು ಪ್ಯಾನ್ ತೆಗೆದುಕೊಂಡು ಅರಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ 1 ಚಮಚ ಉದ್ದಿನಬೇಳೆ, ಸಾಸಿವೆ ಮತ್ತು ಕರಿಬೇವನ್ನು ಕ್ರಮವಾಗಿ ಹಾಕಿ ಉದ್ದಿನ ಬೇಳೆ ಕೆಂಪಗಾದಾಗ ಬೇಯಿಸಿದ ತರಕಾರಿಗಳನ್ನು ಸೇರಿಸಿ ಹುರಿಯಿರಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿದರೆ ತರಕಾರಿ ಸಾಗು ರೆಡಿಯಾಗುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಇದರಲ್ಲಿ ಮೆಣಸನ್ನು ಸೇರಿಸಿಕೊಳ್ಳಬಹುದು. ಇದು ಚಪಾತಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.