ಹೆಚ್ಚಾಗಿ ಪ್ರೋಟಿನ್ ಹೊಂದಿರುವ ಧಾನ್ಯಗಳಲ್ಲಿ ರಾಜ್ಮಾ ಪ್ರಮುಖವೆಂದೇ ಹೇಳಬಹುದು ಇದನ್ನು ಕಿಡ್ನಿ ಬೀನ್ಸ್ ಎಂತಲೂ ಕರೆಯುತ್ತಾರೆ ಇದರಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಸಾಕಷ್ಟು ಷೋಷಕಾಂಶಗಳು ಈ ಕಾಳಿನಲ್ಲಿವೆ ಇದನ್ನು ಬಳಸಿ ನೀವು ತರಹೇವಾರಿ ತಿನಿಸುಗಳನ್ನು ಸುಲಭವಾಗಿ ತಯಾರಿಸಬಹುದು ಅದರಲ್ಲಿ ರಾಜ್ಮಾ ಆಲೂ ಕಟ್ಲೆಟ್ ಕೂಡಾ ಒಂದು ಇದು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.
ರಾಜ್ಮಾ ಕಾಳು- 1 ಲೋಟ (ಸಾಮಾನ್ಯ ಅಳತೆಯ ಲೋಟ)
ಆಲೂಗೆಡ್ಡೆ- 3 (ಮಧ್ಯಮ ಗಾತ್ರದ್ದು)
ಕೊತ್ತುಂಬರಿ ಸೊಪ್ಪು- ಅರ್ಧ ಕಟ್ಟು
ಹಸಿಮೆಣಸಿನ ಕಾಯಿ- 2
ಹಸಿಶುಂಠಿ- ಅರ್ಧ ಇಂಚು
ಗರಂ ಮಸಾಲ ಪುಡಿ- ಅರ್ಧ ಚಮಚ
ರೆಡ್ ಚಿಲ್ಲಿ ಪೌಡರ್- 1 ಚಮಚ
ಚಾಟ್ ಮಸಾಲ- ಅರ್ಧ ಚಮಚ
ದನಿಯ-ಜೀರಿಗೆ ಪುಡಿ- 1 ಚಮಚ
ಎಣ್ಣೆ- ಕಟ್ಲೆಟ್ ಮಾಡಲು
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಇದನ್ನು ತಯಾರಿಸುವ ಹಿಂದಿನ ದಿನ ರಾತ್ರಿ ಪೂರ್ತಿ ಈ ಕಾಳುಗಳನ್ನು ನೆನೆಹಾಕಬೇಕು ಮರುದಿನ ಬೆಳ್ಳಿಗ್ಗೆ ಅದು ಚೆನ್ನಾಗಿ ನೆನೆದಿರುತ್ತದೆ ಹೀಗೆ ನೆನೆದ ರಾಜ್ಮಾ ಕಾಳುಗಳಿಗೆ ಸ್ವಲ್ಪ ಉಪ್ಪು ಸೇರಿಸಿ ಕಾಲು ಲೋಟದಷ್ಟು ನೀರನ್ನು ಸೇರಿಸಿ ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿ ಬೇಯಿಸಿಕೊಳ್ಳಿ. ಕುಕ್ಕರ್‌ನಿಂದ ಹೊರತೆಗೆದಾಗ ಅದು ಚೆನ್ನಾಗಿ ಬೆಂದಿದೆಯಾ ಎಂದು ಖಾತ್ರಿ ಮಾಡಿಕೊಳ್ಳಿ. ಈಗ ಅದರಲ್ಲಿನ ನೀರು ಹೋಗುವಂತೆ ಅದನ್ನು ಜಾಲರಿಯಲ್ಲಿ ಶೋಧಿಸಲು ಇಡಿ. ನೀರಿನ ಅಂಶವೆಲ್ಲಾ ಹೋದಾಗ ಬೆಂದ ಕಾಳುಗಳನ್ನು ಮಿಕ್ಸರ್ ಜಾರ್ ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಕೊತ್ತುಂಬರಿ ಸೊಪ್ಪನ್ನು ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನ ಕಾಯಿ-ಹಸಿಶುಂಠಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಈಗ ರುಬ್ಬಿದ ಕಾಳುಗಳನ್ನು, ತುರಿದ ಆಲೂವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಮೇಲೆ ತಿಳಿಸಿದ ಪ್ರಮಾಣದಲ್ಲಿ ಗರಂ ಮಸಾಲ, ಚಾಟ್ ಮಸಾಲ, ರೆಡ್ ಚಿಲ್ಲಿ ಪೌಡರ್, ಹೆಚ್ಚಿಟ್ಟ ಕೊತ್ತುಂಬರಿ ಸೊಪ್ಪು, ಹಸಿಮೆಣಸಿನ ಕಾಯಿ-ಹಸಿಶುಂಠಿಯ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು (ರಾಜ್ಮಾ ಕಾಳು ಬೇಯಿಸುವಾಗ ಹಾಕಿದ ಉಪ್ಪನ್ನು ಗಮನದಲ್ಲಿಟ್ಟುಕೊಳ್ಳಿ) ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಹೀಗೆ ಮಿಶ್ರ ಮಾಡಿಟ್ಟ ಹಿಟ್ಟಿನಲ್ಲಿ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಂಡು ನಂತರ ಅದನ್ನು ಚಪ್ಪಟೆಯಾಕಾರ (ಫ್ಲಾಟ್) ಮಾಡಿ.ಗ್ಯಾಸ್ ಹೊತ್ತಿಸಿ ಕಾವಲಿ ಇಟ್ಟು, ಅದು ಕಾದಾಗ ಒಂದೆರಡು ಚಮಚ ಎಣ್ಣೆಯನ್ನು ಕಾವಲಿಗೆ ಹಾಕಿ, ಚಪ್ಪಟೆಯಾಕಾರದಲ್ಲಿ ಮಾಡಿಟ್ಟ ಕಟ್ಲೆಟ್ ಹಿಟ್ಟನ್ನು ಹಾಕಿ ಮದ್ಯಮ ಉರಿಯಲ್ಲಿ ಬೇಯಿಸಿ. ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಬದಿ ಬೇಯಿಸಲು ಅದನ್ನು ಮತ್ತೊಂದು ಬದಿಗೆ ತಿರುಗಿಸಿ, ಒಂದೆರಡು ಚಮಚ ಎಣ್ಣೆ ಹಾಕಿ. ಸ್ವಲ್ಪ ಕಂದು ಬಣ್ಣ ಬರುವವರೆಗೆ ಕಾವಲಿಯಲ್ಲಿ ಬೇಯಿಸಿ. ನಂತರ ಈಚೆ ತೆಗೆಯಿರಿ. ರುಚಿಕರ, ಆರೋಗ್ಯಕರ ರಾಜ್ಮಾ-ಆಲೂ ಕಟ್ಲೆಟ್ ಸವಿಯಲು ಸಿದ್ಧ. ತೆಂಗಿನ ಚಟ್ನಿಯೊಂದಿಗೆ ಅಥವಾ ಟೊಮೊಟೊ ಸಾಸ್ ಜೊತೆಗೆ ಇದರ ಕಾಂಬಿನೇಶನ್ ಉತ್ತಮವಾಗಿರುತ್ತದೆ.