ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ.
ಉದ್ದಿನ ಬೇಳೆಯನ್ನು ಒಣ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅಥವಾ ಅದನ್ನೂ ಕೂಡ ತೊಳೆದು ಬಟ್ಟೆಯ ಮೇಲೆ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ. ನಂತರ ಬಾಣಲೆಯಲ್ಲಿ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಉಗುರು ಬೆಚ್ಚಗೆ ಹುರಿಯಬೇಕು, ಉದ್ದಿನ ಬೇಳೆಯನ್ನೂ ಸಹ ಸಂಪಿಗೆ ಬಣ್ಣಕ್ಕೆ ಸ್ವಲ್ಪ ಹುರಿಯಬೇಕು. ನಂತರ ಎರಡೂ ಸೇರಿಸಿ ಫ್ಲೋರ್ ಮಿಲ್‌ನಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಡಿ.
ತೇಂಗೊಳಲು ಮಾಡಲು, 2 ಚಮಚ ತಣ್ಣನೆ ಬೆಣ್ಣೆಯನ್ನು ಚೆನ್ನಾಗಿ ಕೌಯಿಂದ ಕಿವುಚಿ, 1 ಪಾವು ಹಿಟ್ಟಿಗೆ ಸೇರಿಸಿ, ಎಳ್ಳು, ಜೀರಿಗೆ, ಉಪ್ಪು, ಇಂಗು ಸೇರಿಸಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ಚಕ್ಕುಲಿ ಒರಳಿನಲ್ಲಿ ತೇಂಗೊಳಲು ಬಿಲ್ಲೆ ಹಾಕಿ, (ಬಿಲ್ಲೆ ಫೋಟೋ ಹಾಕಿದ್ದೇನೆ, ಮೂರು ರಂಧ್ರಗಳಿರುತ್ತೆ) ತೇಂಗೊಳಲು ಗುಂಡಗೆ ಒತ್ತಿ, ತುದಿಗಳನ್ನು ಸೇರಿಸಿ, ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿಯಿರಿ.