ಟೊಮೆಟೋ ಆಮ್ಲೆಟ್ ಬೆಳಿಗ್ಗೆ ತಿಂಡಿಗೆ ಅಥವಾ ಸಂಜೆಯ ಸಮಯದಲ್ಲಿ ಟೀ ಅಥವಾ ಕಾಫಿಯ ಜೊತೆ ತಿನ್ನಲು ಮಾಡಬಹುದಾದ ತಿಂಡಿ. ಇದನ್ನು ಬಹಳ ಶೀಘ್ರವಾಗಿ ಮಾಡಬಹುದು ಮತ್ತು ರುಚಿಯಾಗಿಯೂ ಇರುತ್ತದೆ. ಇದು ಸಾಯಂಕಾಲ ಮಕ್ಕಳು ಶಾಲೆಯಿಂದ ಬಂದಾಗ ಅವರಿಗೆ ಮಾಡಿಕೊಡಲೂ ಸೂಕ್ತವಾದ ತಿಂಡಿಯಾಗಿದೆ. ನೀವು ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು - 1 ಕಪ್
ಅಚ್ಚಖಾರದ ಪುಡಿ - 1 ಚಮಚ
ಟೊಮೆಟೋ - 2-3
ಹಸಿಮೆಣಸು - 1
ಈರುಳ್ಳಿ - 1-2
ಶುಂಠಿ - 1/2 ಇಂಚು
ಕೊತ್ತಂಬರಿ ಸೊಪ್ಪು - 1/4 ಕಟ್ಟು
ಇಂಗು - 1/4 ಚಮಚ
ಅರಿಶಿಣ - 1/2 ಚಮಚ
ಗರಂ ಮಸಾಲಾ - 1/4 ಚಮಚ
ಉಪ್ಪು - ರುಚಿಗೆ
ನೀರು - 1/2-1 ಕಪ್
ಎಣ್ಣೆ - ಸ್ವಲ್ಪ
ಮಾಡುವ ವಿಧಾನ:
* ಟೊಮೆಟೋ, ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ.
* ನಂತರ ಅದಕ್ಕೆ ಕಡಲೆ ಹಿಟ್ಟು, ಇಂಗು, ಅಚ್ಚಖಾರದ ಪುಡಿ, ಅರಿಶಿಣ, ಉಪ್ಪು, ಗರಂ ಮಸಾಲಾವನ್ನು ಸೇರಿಸಿ ಅಗತ್ಯವಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿಮಾಡಿಕೊಳ್ಳಿ.
* ಈಗ ಒಂದು ತವಾವನ್ನು ಸ್ಟೌ ಮೇಲೆ ಇಟ್ಟು ಸುಮಾರು 1 ಚಮಚ ಎಣ್ಣೆಯನ್ನು ತವಾ ಮೇಲೆ ಹರಡಿ. ಅದು ಕಾದ ನಂತರ ರೆಡಿಮಾಡಿಟ್ಟಿರುವ ಹಿಟ್ಟನ್ನು ತವಾ ಮೇಲೆ ಹಾಕಿ ಹರಡಿ. ಈಗ ಅದರ ಮೇಲೆ 1 ಚಮಚ ಎಣ್ಣೆಯನ್ನು ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಟೊಮೆಟೋ ಆಮ್ಲೆಟ್ ರೆಡಿ.
ಟೊಮೆಟೋ ಆಮ್ಲೆಟ್ ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಟೊಮೆಟೋ ಸಾಸ್‌ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಹೀಗೆ ಸರಳವಾಗಿ ಮತ್ತು ಶೀಘ್ರವಾಗಿ ಮಾಡಬಹುದಾದ ಟೊಮೆಟೋ ಆಮ್ಲೆಟ್ ಅನ್ನು ನೀವೂ ಒಮ್ಮೆ ಮಾಡಿ ಸವಿದು ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.