ಕರಿಬೇವು ದಕ್ಷಿಣ ಭಾರತದಲ್ಲಿ ಮಾಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದೆ. ಇದು ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ಕೂದಲ ಬೆಳವಣಿಗೆಗೆ ಉತ್ತಮವಾದುದಾಗಿದೆ. ಇಂತಹ ಆರೋಗ್ಯಕರವಾದ ಕರಿಬೇವನ್ನು ಕೇವಲ ಒಗ್ಗರಣೆಯಲ್ಲಿ ಬಳಸದೇ ಅದರಿಂದಲೇ ಚಟ್ನಿಪುಡಿಯನ್ನು ತಯಾರಿಸಬಹುದಾಗಿದೆ. ಈ ಚಟ್ನಿಪುಡಿ ಅನ್ನದ ಜೊತೆ ರುಚಿಯಾಗಿರುತ್ತದೆ ಮತ್ತು ದೋಸೆ, ಚಪಾತಿಗಳೊಂದಿಗೂ ತಿನ್ನಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಕರಿಬೇವು - 1 ಕಪ್
ಕಡಲೆಬೇಳೆ - 1/4 ಕಪ್
ಉದ್ದಿನಬೇಳೆ - 2 ಚಮಚ
ದನಿಯಾ - 1 ಚಮಚ
ಹುಣಿಸೆಹಣ್ಣು - ಚಿಕ್ಕ ಚೂರು
ಕೆಂಪು ಮೆಣಸು - 5
ಒಣ ಕೊಬ್ಬರಿ ತುರಿ - 2 ಚಮಚ
ಇಂಗು - ಚಿಟಿಕೆ
ಉಪ್ಪು - ರುಚಿಗೆ
ಎಣ್ಣೆ - 2 ಚಮಚ
ಮಾಡುವ ವಿಧಾನ:
ಕರಿಬೇವಿನ ಎಲೆಯನ್ನು ಒಂದು ಪ್ಯಾನ್‌ಗೆ ಹಾಕಿ ಗರಿಗರಿಯಾಗಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಕಡಲೆಬೇಳೆ, ಉದ್ದಿನ ಬೇಳೆ ಮತ್ತು ದನಿಯಾವನ್ನು ಹಾಕಿ 2-3 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ಹುಣಿಸೆ ಹಣ್ಣು, ಕೆಂಪು ಮೆಣಸು ಮತ್ತು ಒಣ ಕೊಬ್ಬರಿ ತುರಿಯನ್ನು ಸೇರಿಸಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿದು ಸ್ಟೌ ಆಫ್ ಮಾಡಿ. ಈ ಮಸಾಲೆಯು ಸ್ವಲ್ಪ ತಣ್ಣಗಾದ ಮೇಲೆ ಈ ಮೊದಲೇ ಹುರಿದಿಟ್ಟ ಕರಿಬೇವನ್ನು ಸೇರಿಸಿ ಅದಕ್ಕೆ ಚಿಟಿಕೆ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿದರೆ ಕರಿಬೇವಿನ ಚಟ್ನಿ ಪುಡಿ ಸಿದ್ಧವಾಗುತ್ತದೆ.