ನಾಗ್ಪುರ: ಸ್ನೇಹಿತರೊಂದಿಗೆ ಸುತ್ತಾಡುವಾಗ ಸೆಲ್ಫೀ ತೆಗೆದು ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಪೋಸ್ಟ್ ಮಾಡುವುದು ಇತ್ತೀಚೆಗೆ ಕಾಮನ್. ಆದರೆ ಈ ಹುಡುಗರ ದುರದೃಷ್ಟ ನೋಡಿ. ಹಾಗೆ ಪೋಸ್ಟ್ ಮಾಡಿದ ನಿಮಿಷಾರ್ಧದಲ್ಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನಾಗ್ಪುರದಲ್ಲಿ ಈ ಧಾರುಣ ಘಟನೆ ನಡೆದಿದೆ. ಪಿಕ್ ನಿಕ್ ಗೆಂದು ತೆರಳಿದ್ದ ಯುವಕರು ದೋಣಿ ದುರಂತದಲ್ಲಿ ನೀರು ಪಾಲಾಗಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದು, ಉಳಿದ ಐವರ ದೇಹಗಳಿಗಾಗಿ ಶೋಧ ನಡೆದಿದೆ. ಇಬ್ಬರನ್ನು ಜೀವಂತವಾಗಿ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಹತ್ತಿರದಲ್ಲೇ ಇದ್ದ ಡ್ಯಾಮ್ ಗೆ ತೆರಳುತ್ತಿದ್ದ 20 ರಿಂದ 25 ವರ್ಷ ಆಸುಪಾಸಿನ ಯುವಕರು, ಸೆಲ್ಫೀ ತೆಗೆಯುತ್ತಿರುವಾಗಲೇ ಈ ದುರಂತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇದೀಗ ಸ್ಥಳದಲ್ಲಿ ಅಗ್ನಿ ಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.