ಕಳೆದ ವಾರ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್ ವಿರುದ್ಧ ತೀರ್ಪು ಬಂದ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸರಕಾರ ಸೂಕ್ತವಾಗಿ ಪ್ರತಿಕ್ರಿಯಿಸಿದೆ. ವಿಪಕ್ಷಗಳ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನಾವು ಮಾಡಿರುವುದೇ ಸರಿ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಸರಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಹರಿಯಾಣಾದಲ್ಲಿ ನಡೆದ ಘಟನೆಗಳ ಬಗ್ಗೆ ವರದಿ ಸಲ್ಲಿಸಿದ ನಂತರ ಸಿಎಂ ಖಟ್ಟರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮ್ ರಹೀಮ್ ವಿರುದ್ಧವಾಗಿ ತೀರ್ಪು ಬಂದಲ್ಲಿ ಹಿಂಸಾಚಾರ ಆರಂಭವಾಗುವುದು ಎಂದು ಗೊತ್ತಿದ್ದರೂ ಪಂಚಕುಲಾ ಮತ್ತು ಸಿರ್ಸಾದಲ್ಲಿ ಬಾಬಾ ಅವರ ಮೂರು ಲಕ್ಷ ಅನುಯಾಯಿಗಳು ಒಂದು ಕಡೆ ಸೇರಲು ಖಟ್ಟರ್ ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಆದ್ದರಿಂದಲೇ ಹಿಂಸಾಚಾರದಲ್ಲಿ 38 ಜನರು ಪ್ರಾಣ ಕಳೆದುಕೊಂಡರು ಎಂದು ವಿಪಕ್ಷಗಳು ಆರೋಪಿಸಿವೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, ಕೋರ್ಟ್ ಆದೇಶಗಳನ್ನು ಪಾಲಿಸಿ, ಸಂಯಮದಿಂದ ಗುರಿ ಸಾಧಿಸಿದ್ದೇವೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಪ್ರತಿಪಕ್ಷಗಳ ಒತ್ತಾಯವನ್ನು ತಿರಸ್ಕರಿಸಿದರು.
ಪ್ರತಿಪಕ್ಷಗಳು ಏನು ಹೇಳುತ್ತವೆ ಎನ್ನುವುದು ಮುಖ್ಯವಲ್ಲ. ನಮ್ಮ ಕಾರ್ಯನಿರ್ವಹಣೆ ತೃಪ್ತಿ ತಂದಿದೆ. ನಾವು ಮಾಡಿದ್ದೇ ಸರಿ. ಇದೀಗ ರಾಜ್ಯದಲ್ಲಿ ಶಾಂತಿ ನೆಲೆಸಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.