ನವಹದೆಲಿ : ದೇಶವು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಅನ್ನು ಸೆಪ್ಟೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಿದ್ದಾರೆ.
ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಯುದ್ಧ ನೌಕೆ ವಿಕ್ರಾಂತ್ ಅನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದ್ದು, ಅಂದು ಪ್ರಧಾನಿ ಅಧೀಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ನೌಕೆ ಕಾರ್ಯ ನಿರ್ವಹಿಸಲಿದೆ. ವಿಕ್ರಾಂತ್ ಕಳೆದ ಜುಲೈನಲ್ಲಿ ತನ್ನ ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ವಿಕ್ರಾಂತ್ ವಿಶೇಷತೆ ಏನು?
• ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಓಆರ್) ಭಾರತದ ಸ್ಥಾನವನ್ನು ಮತ್ತು ನೀಲಿಜಲ ನೌಕಾಪಡೆಯ ಅನ್ವೇಷಣೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸುತ್ತದೆ.
• 2,300 ವಿಭಾಗಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್ಗಳನ್ನು ಒಳಗೊಂಡಂತೆ 1,700 ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾಗಿದೆ.
• ನೌಕೆಯು 262 ಮೀಟರ್ ಉದ್ದ, 62 ಮೀಟರ್ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭಗೊಂಡಿತ್ತು.
• 8 ಪವರ್ ಜನರೇಟರ್ಗಳನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಆಸ್ಪತ್ರೆಯನ್ನೂ ಇದೇ ಸಂಕಿರ್ಣದಲ್ಲಿ ನಿರ್ಮಿಸಲಾಗಿದೆ.