ಬೆಂಗಳೂರು: ಮೈಸೂರಿನ ಮಾಜಿ ಸಂಸದ ಸಿ.ಎಚ್. ವಿಜಯ್ ಶಂಕರ್ ಅವರು ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ, ಜಾರ್ಖಂಡ್, ಮೇಘಾಲಯ ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾಗಿದೆ.
ವಿಜಯಶಂಕರ್ ಅವರು ಈ ಹಿಂದೆ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಣೆ ಬೆನ್ನೂರು ಮೂಲದವರಾಗಿದ್ದು, 1994ರಿಂದ 98ರವರೆಗೆ ಮೊದಲ ಬಾರಿಗೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2010ರಿಂದ 16ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು, 2010ರಲ್ಲಿ ಕರ್ನಾಟಕ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು.
ತೆಲಂಗಾಣ ಹಾಗೂ ಜಾರ್ಖಂಡ್ನ ಹಾಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ನೇಮಿಸಲಾಗಿದೆ. ಹರಿಬಾವ್ ಕಿಶನ್ ಬಾವ್ ಬಾಗಡೆ ಅವರನ್ನು ರಾಜಸ್ಥಾನಕ್ಕೆ , ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ಗೆ ನೇಮಿಸಲಾಗಿದೆ. ರಾಮನ್ ಡೇಕಾ ಅವರನ್ನು ಛತ್ತೀಸ್ಗಢ ರಾಜ್ಯಪಾಲರಾಗಿ, ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರಾಗಿ, ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂ ರಾಜ್ಯಪಾಲರಾಗಿ ನೇಮಿಸಲಾಗಿದೆ.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿರುವ ಕೈಲಾಸನಾಥನ್ ಅವರು ಗುಜರಾತ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿದ್ದಾರೆ. ಕೈಲಾಸನಾಥನ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ಮೋದಿಯವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಈ ವರ್ಷ ಜೂನ್ 30 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು. 2013ರಲ್ಲಿ ನಿವೃತ್ತಿಯಾಗಿದ್ದರೂ 11 ಸೇವಾ ವಿಸ್ತರಣೆಗಳನ್ನು ನೀಡಲಾಗಿತ್ತು.
ಅಸ್ಸಾಂನ ಹಾಲಿ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರಾಗಿ, ಜೊತೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ನೇಮಿಸಿದ್ದು, ಇವರಿಗೆ ಮಣಿಪುರದ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ ಕೆ.ಕೈಲಾಸನಾಥನ್ ಅವರನ್ನು ಪುದುಚೇರಿಯ ಉಪ ರಾಜ್ಯಪಾಲರಾಗಿನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.<>