ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಅವರನ್ನು ಬಿಜೆಪಿ ಹೈಕಮಾಂಡ್ ಘೋಷಿಸಿದೆ.
ಇದಕ್ಕಿಂತ ಮೊದಲು ಮುಖ್ಯಮಂತ್ರಿ ಆನಂದಿ ಬೆನ್ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ನಿತಿನ್ ಪಟೇಲ್ ಗುಜರಾತ್ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ವರದಿಗಳು ಹರಡಿದ್ದವು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದ ಸಭೆಯಲ್ಲಿ, ರೂಪಾನಿಯವರಿಗೆ ಹೆಚ್ಚಿನ ಶಾಸಕರು ಬೆಂಬಲ ಸೂಚಿಸಿದ್ದರಿಂದ, ಅವರನ್ನು ರಾಜ್ಯದ ನೂತನ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.
ಸಭೆಯ ನಂತರ ವಿಜಯ್ ರೂಪಾನಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವುದರಿಂದ ಬಹು ಸಮಸ್ಯೆಗಳನ್ನು ವಿಜಯ್ ರೂಪಾಯಿ ಎದುರಿಸಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಮತ್ತು ರಾಜ್ಯದ ನಾಯಕರುಗಳಿಗೆ ವಯಸ್ಸಿನ ಮಿತಿಯನ್ನು ಹೇರಿದ್ದರಿಂದ, ಆನಂದಿ ಬೆನ್ ಪಟೇಲ್ ತಮ್ಮ ರಾಜೀನಾಮೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಸಲ್ಲಿಸಿದ್ದರು.
ನೂತನ ಮುಖ್ಯಮಂತ್ರಿಯ ಆಯ್ಕೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ನಿನ್ನೆಯಿಂದ ಗುಜರಾತ್ ಬಿಜೆಪಿ ನಾಯಕರೊಂದಿಗೆ ನಿರಂತರ ಸಭೆ ನಡೆಸಿದ್ದರು ಎನ್ನಲಾಗಿದೆ.
ಬಿಜೆಪಿಯ ಸಂಸದೀಯ ಮಂಡಳಿ ಆನಂದಿ ಬೆನ್ ರಾಜೀನಾಮೆಯನ್ನು ಅಂಗೀಕರಿಸಿ, ನೂತನ ಮುಖ್ಯಮಂತ್ರಿ ಆಯ್ಕೆಗೆ ಚಾಲನೆ ನೀಡಿತ್ತು.
ದೀರ್ಘಾವಧಿಯಿಂದ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಪಟೇಲ್ ಮೀಸಲಾತಿ ಹೋರಾಟ ಸಮಿತಿ, ದಲಿತರ ಮೇಲಿನ ದೌರ್ಜನ್ಯ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನೆಡೆ ಸೇರಿದಂತೆ ಹಲವು ಕಾರಣಗಳು ಆನಂದಿ ಬೆನ್ ಪಟೇಲ್ ರಾಜೀನಾಮೆಗೆ ಪೂರಕವಾಗಿವೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.