Publish Date: Mon, 31 Aug 2026 (14:27 IST)
Updated Date: Mon, 31 Aug 2026 (14:32 IST)
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರದಲ್ಲಿ ತುದಿಯಲ್ಲಿದ್ದ ಮರವೊಂದು ದಿಢೀರನೆ ರಸ್ತೆಗೆ ಬಿದ್ದ ಪರಿಣಾಮ, ವಿದ್ಯುತ್ ತಂತಿಗಳು ಕೆಳಗೆ ಬಿದ್ದು ದಾರಿಯಲ್ಲಿ ತೆರಳುತ್ತಿದ್ದ ವೃದ್ಧರೊಬ್ಬರು ವಿದ್ಯುತ್ ಆಘಾತಕ್ಕೆ ಸಿಲುಕಿ ಚಡಪಡಿಸಿದ ಆಘಾತಕಾರಿ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಅಂಗಡಿಕಾರರು ತೋರಿದ ಅಪ್ರತಿಮ ಸಮಯಪ್ರಜ್ಞೆಯಿಂದಾಗಿ ವೃದ್ಧರ ಪ್ರಾಣ ಪವಾಡಸದೃಶವಾಗಿ ರಕ್ಷಿಸಲ್ಪಟ್ಟಿದೆ.
ಧಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಾರಿ ಕುವಾಂ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವೃದ್ಧರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡವೊಂದರ ಮೇಲ್ಭಾಗದಲ್ಲಿದ್ದ ಮರವೊಂದು ಹಠಾತ್ತನೆ ರಸ್ತೆಯ ಕಡೆಗೆ ಧರೆಗುರುಳಿದೆ. ಮರ ಬೀಳುವ ರಭಸಕ್ಕೆ ಅಲ್ಲಿದ್ದ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದಿದ್ದು, ರಸ್ತೆಯಲ್ಲಿದ್ದ ವೃದ್ಧರ ಮೈಮೇಲೆ ಬಿದ್ದು ಆವರಿಸಿಕೊಂಡಿವೆ.
ವಿದ್ಯುತ್ ತಂತಿ ಸಿಲುಕಿಕೊಂಡ ತಕ್ಷಣವೇ ವೃದ್ಧರು ಆಘಾತಕ್ಕೆ ಒಳಗಾಗಿ ರಸ್ತೆಯಲ್ಲೇ ಬಿದ್ದು ನರಳಾಡಲು ಪ್ರಾರಂಭಿಸಿದರು. ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರು ಮತ್ತು ಸ್ಥಳೀಯರು ಘಟನೆಯನ್ನು ಕಂಡ ತಕ್ಷಣವೇ ಧೈರ್ಯದಿಂದ ಮುನ್ನುಗ್ಗಿದ್ದಾರೆ. ವಿದ್ಯುತ್ ಪ್ರವಾಹವಿರುವ ತಂತಿಯನ್ನು ಮುಟ್ಟದೆ, ಮರದ ಕೋಲುಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ತಕ್ಷಣವೇ ತಂತಿಯನ್ನು ವೃದ್ಧರಿಂದ ದೂರ ಸರಿಸಿದ್ದಾರೆ. ಸ್ಥಳೀಯರ ಈ ಕ್ಷಿಪ್ರ ಕಾರ್ಯಚರಣೆಯಿಂದಾಗಿ ವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಪೂರ್ಣ ಭೀಕರ ಘಟನೆಯ ಲೈವ್ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ವೃದ್ಧನ ಜೀವ ಉಳಿಸಿದ ಸ್ಥಳೀಯ ಅಂಗಡಿಕಾರರ ಸಾಹಸ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ