Publish Date: Mon, 21 Sep 2026 (12:48 IST)
Updated Date: Mon, 21 Sep 2026 (13:31 IST)
ಹರಿದ್ವಾರ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ವೈರಲ್ ಆಗುವ ಹುಚ್ಚಿಗಾಗಿ ಜನರು ಎಷ್ಟರಮಟ್ಟಿಗೆ ಸಾಹಸಕ್ಕೆ ಕೈಹಾಕುತ್ತಾರೆ ಎಂಬುದಕ್ಕೆ ಹರಿದ್ವಾರದ ಈ ಘಟನೆ ನಿದರ್ಶನವಾಗಿದೆ. ಹರಿದ್ವಾರದ ಖಡ್ಖಡಿ ರೈಲ್ವೆ ಕ್ರಾಸಿಂಗ್ ಬಳಿ ಯುವಕನೊಬ್ಬ ಜೀವಂತ ಬೃಹತ್ ಹೆಬ್ಬಾವನ್ನು ಹೆಗಲು ಹಾಗೂ ಕತ್ತಿನ ಸುತ್ತಲೂ ಹಾಕಿಕೊಂಡು ನಿರ್ಭೀತವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿದೆ.
ಜನನಿಬಿಡ ಪ್ರದೇಶದಲ್ಲಿ ನಡೆದಿರುವ ಈ ಘಟನೆಯನ್ನು ಕಂಡ ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಹಾವಿನೊಂದಿಗೆ ಸಾಗುತ್ತಿದ್ದ ಯುವಕನನ್ನು ಕಂಡು ಕುತೂಹಲದಿಂದ ಜನರು ಆತನ ಸುತ್ತಲೂ ನೆರೆದಿದ್ದಲ್ಲದೆ, ತಮ್ಮ ಮೊಬೈಲ್ ಫೋನ್ಗಳಲ್ಲಿ ಈ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ದೃಶ್ಯ ವೈರಲ್ ಆಗಿದೆ.
ಕಾನೂನು ಉಲ್ಲಂಘನೆ ಮತ್ತು ಅರಣ್ಯ ಇಲಾಖೆಯ ಪ್ರತಿಕ್ರಿಯೆ:
ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹೆಬ್ಬಾವುಗಳನ್ನು ಸೆರೆಹಿಡಿಯುವುದು, ಪ್ರದರ್ಶಿಸುವುದು ಅಥವಾ ಖಾಸಗಿಯಾಗಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ವೀಡಿಯೋ ಗಮನಕ್ಕೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಹರಿದ್ವಾರ ವಲಯದ ಅರಣ್ಯ ಇಲಾಖಾಧಿಕಾರಿಗಳು, ಯುವಕನ ಗುರುತು ಪತ್ತೆಹಚ್ಚಲು ಹಾಗೂ ಆತನಿಗೆ ಹಾವು ಎಲ್ಲಿಂದ ಸಿಕ್ಕಿತು ಎಂಬುದನ್ನು ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ.
ವನ್ಯಜೀವಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಹೆಬ್ಬಾವುಗಳು ತಕ್ಷಣವೇ ವಿಷಕಾರಿ ಅಲ್ಲದಿದ್ದರೂ, ಅವುಗಳ ಬಲವಾದ ಹಿಡಿತದಿಂದ ಮನುಷ್ಯನಿಗೆ ತೀವ್ರ ಹಾನಿ ಉಂಟುಮಾಡುವ ಅಥವಾ ಉಸಿರುಗಟ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ರೀಲ್ಸ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಲು ಇಂತಹ ಅಪಾಯಕಾರಿ ವನ್ಯಜೀವಿಗಳನ್ನು ಬಳಸಿಕೊಳ್ಳುವುದು ಕಾನೂನುಬಾಹಿರ ಮತ್ತು ಜೀವಕ್ಕೆ ತೀವ್ರ ಆಪತ್ತು ತರುವಂತಹದ್ದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ