ನವದೆಹಲಿ : ದೇಶದಲ್ಲಿ 73 ಕೋಟಿ ಮಂದಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲು ಕಾರಣವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಟ್ಯುಟಿಕಾರಿನ್ನಲ್ಲಿ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಾದ್ಯಂತ ಲಸಿಕೆ ಹಾಕುವ ಕಾರ್ಯಕ್ರಮ ನಿರಾಂತಕವಾಗಿ ನಡೆಯುತ್ತಿದೆ.
ಹೀಗಾಗಿ, ಜನರು ತಮ್ಮ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ನೆರವಾಗಿದೆ. ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಹೀಗಾಗಿ, ಲಸಿಕೆ ಹಾಕುವುದೊಂದೇ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲು ಇರುವ ದಾರಿ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ದೇಶದಲ್ಲಿ ಶನಿವಾರದಿಂದ ಭಾನುವಾರದ ಅವಧಿಯಲ್ಲಿ 28,591 ಹೊಸ ಸೋಂಕು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 338 ಮಂದಿ ಅಸುನೀಗಿದ್ದಾರೆ. ಮತ್ತೂಂದು ಧನಾತ್ಮಕ ಬೆಳವಣಿಗೆಯಲ್ಲಿ ಸಕ್ರಿಯ ಸೋಂಕು ಸಂಖ್ಯೆ 6,600 ಇಳಿಕೆಯಾಗಿದ್ದರಿಂದ 3,32,36,921ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.97.51 ಆಗಿದೆ. 24 ಗಂಟೆಗಳ ಅವಧಿಯಲ್ಲಿ ದೃಢಪಟ್ಟ ಪ್ರಕರಣಗಳ ಪೈಕಿ ಕೇರಳ ಪಾಲು ಶೇ.70 ಆಗಿದೆ. ಇನ್ನೊಂದೆಡೆ, ಕೇರಳದಲ್ಲಿ ಭಾನುವಾರ ಒಂದೇ ದಿನ 20,240 ಹೊಸ ಕೇಸುಗಳು ಪತ್ತೆಯಾಗಿವೆ. 67 ಮಂದಿ ಅಸುನೀಗಿದ್ದಾರೆ. ಇದೇ ವೇಳೆ ತಮಿಳುನಾಡಿನಲ್ಲಿ ಭಾನುವಾರ ಒಂದೇ ದಿನ 22.6 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ರಾಜಧಾನಿ ಚೆನ್ನೈನಲ್ಲಿ 1.11 ಲಕ್ಷ ಡೋಸ್ ನೀಡಲಾಗಿದೆ.