ಉತ್ತರಪ್ರದೇಶ: ವಿಷದ ಹಾವು ಒಮ್ಮೆ ಕಡಿದರೇ ಬದುಕುಳಿಯುವುದು ಕಷ್ಟ. ಹಾಗಿರುವಾಗ ಈ ಯುವಕನಿಗೆ ಕಳೆದ ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವು ಕಡಿದಿದ್ದು ಆದರೂ ಬದುಕುಳಿದಿದ್ದಾನೆ ಎನ್ನುವುದೇ ಅಚ್ಚರಿ. ಇಂತಹದ್ದೊಂದು ಅಚ್ಚರಿ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.
ಇಷ್ಟು ಬಾರಿ ಹಾವು ಕಡಿದರೂ ಆತ ಬದುಕುಳಿದಿರುವುದೇ ಪವಾಡ ಎಂದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೌರಾ ಗ್ರಾಮದ ನಿವಾಸಿ ವಿಕಾಸ್ ದುಬೆ ಎಂಬಾತನಿಗೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು ಏಳು ಬಾರಿ ಹಾವು ಕಡಿದಿದೆ. ಇದೀಗ ಏಳನೇ ಬಾರಿ ಹಾವು ಕಡಿತಕ್ಕೊಳಗಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಾರಿಯೂ ಆತ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಜೂನ್ 2 ರಂದು ಮನೆಯಲ್ಲಿ ಟಿವಿ ನೋಡಿಕೊಂಡು ಕುಳಿತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ ಮರಳಿದ್ದ ಆತನಿಗೆ ಮತ್ತೆ ಜೂನ್ 10 ರಂದು ಎರಡನೇ ಬಾರಿ ಹಾವು ಕಚ್ಚಿದೆ. ಆಗಲೂ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾನೆ.
ಬಳಿಕ ಹಾವು ಎಂದರೇ ಆತನಿಗೆ ಭಯ ಹುಟ್ಟಿದೆ. ಇದರಿಂದಾಗಿ ಆತ ಈಗ ರಾತ್ರಿ ಮಲಗಲೂ ಹೆದರುತ್ತಿದ್ದಾನಂತೆ. ನಾಲ್ಕನೇ ಬಾರಿಗೆ ಹಾವು ಕಡಿತಕ್ಕೊಳಗಾದಾಗ ಆತನಿಗೆ ಕೆಲವು ದಿನ ಊರು ಬಿಟ್ಟು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಆತ ತನ್ನ ಚಿಕ್ಕಮ್ಮನ ಊರಿಗೆ ತೆರಳಿದ್ದಾನೆ. ವಿಪರ್ಯಾಸವೆಂದರೆ ಅಲ್ಲೂ ಆತನಿಗೆ ಹಾವು ಕಚ್ಚಿದೆ. ಇದೊಂದು ಪವಾಡ ಎಂದು ವೈದ್ಯರೇ ಹೇಳುತ್ತಿದ್ದಾರೆ.
ಅದರಲ್ಲೂ ಇನ್ನೊಂದು ವಿಶೇಷವೆಂದರೆ ಪ್ರತೀ ಬಾರಿಯೂ ಆತನಿಗೆ ಶನಿವಾರವೇ ಹಾವು ಕಚ್ಚಿದೆ. 24 ವರ್ಷದ ಯುವಕ ವಿಕಾಸ್ ಗೆ ಈಗ 40 ದಿನಗಳಲ್ಲಿ 7 ನೇ ಬಾರಿ ಹಾವು ಕಚ್ಚಿದೆ. ಇದರ ಹಿಂದಿನ ರಹಸ್ಯವೇನೆಂದು ಈಗ ತಿಳಿಯಬೇಕಿದೆ.