ಉತ್ತರ ಪ್ರದೇಶ : ರಾಜ್ಯವು ಮಾಫಿಯಾ, ಸೊಳ್ಳೆ ಮತ್ತು ಕೊಳಕನ್ನು ತೊಡೆದುಹಾಕುತ್ತಿದೆ ಹಾಗೂ ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ತಿಳಿಸಿದ್ದಾರೆ.
'ಒಂದು ಕಾಲದಲ್ಲಿ ಪೂರ್ವ ಉತ್ತರ ಪ್ರದೇಶವು ಮಾಫಿಯಾದ ಕೇಂದ್ರವಾಗಿತ್ತು ಮತ್ತು ಮಲೇರಿಯಾ, ಎನ್ಸೆಫಲೈಟಿಸ್ ಹಾಗೂ ಡೆಂಗ್ಯೂ ಪ್ರಕರಣಗಳು ಈ ಪ್ರದೇಶದಲ್ಲಿ ಹೆಚ್ಚಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ' ಎಂದು ಅವರು ಹೇಳಿದರು.
ಇಲ್ಲಿ ಶುಚಿತ್ವ ಅಭಿಯಾನದ ಆರಂಭದಲ್ಲಿ ಮಾತನಾಡಿದ ಅವರು, ಸ್ಯಾನಿಟೈಸೇಶನ್ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಎನ್ಸೆಫಲೈಟಿಸ್ ಅನ್ನು ರಾಜ್ಯದಲ್ಲಿ ನಿಯಂತ್ರಿಸಬಹುದಾಗಿದೆ. ಪ್ರತಿ ಮನೆಯಲ್ಲೂ ಶೌಚಾಲಯದೊಂದಿಗೆ ಎನ್ಸೆಫಲೈಟಿಸ್ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಹೇಳಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬುದನ್ನು ಹೇಳಿದ ಯೋಗಿ ಆದಿತ್ಯನಾಥ್ ಅವರು, ದೇಶದ 2ನೇ ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ನೈರ್ಮಲ್ಯೀಕರಣ ಶುರುವಾಗಿದೆ ಮತ್ತು ಇದು ಸೆಪ್ಟೆಂಬರ್ 12 ರವರೆಗೆ ಮುಂದುವರಿಯುತ್ತದೆ' ಎಂದು ತಿಳಿಸಿದರು.
ಅವರು ಗೋರಖ್ಪುರ್ ಜಿಲ್ಲೆಯ ಸದರ್ ತಹಸಿಲ್, ಬೆಳ್ವಾರ್, ಕೌದಿರಾಮ್ ಮತ್ತು ಗೋಲಾ ಪ್ರದೇಶಗಳಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.
ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಯನ್ನು ನಡೆಸುವ ಮೊದಲು, ಅವರು ಗೋರಖನಾಥ ದೇವಸ್ಥಾನದಲ್ಲಿ ಜನ ದರ್ಬಾರ್ ಸಮಯದಲ್ಲಿ ಜನರನ್ನು ಭೇಟಿಯಾದರು ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಗೌತಮ್ ಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್.ವೈ. ಅವರನ್ನು ಅಭಿನಂದಿಸಿದರು.