ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ದೇಶಾದ್ಯಂತ ಮನೆಮಾಡಿದೆ. ಈ ಕುರಿತು ಹಲವು ಸುದ್ದಿವಾಹಿನಿಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ಕೈಗೊಂಡಿದ್ದು, ಟೈಮ್ಸ್ ನೌ ನಡೆಸಿದ ಸಮೀಕ್ಷೆಯಲ್ಲಿ ಬಂದ ಫಲಿತಾಂಶದ ಪ್ರಕಾರ ದೇಶದ ಬಹುದೊಡ್ಡ ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಲಿದೆ.
ಸಮೀಕ್ಷಾ ಫಲಿತಾಂಶ ಹೀಗಿದೆ:
*403 ವಿಧಾನಸಭಾ ಕ್ಷೇತ್ರದಲ್ಲಿ 34 ಪ್ರತಿಶತ ಮತಗಳನ್ನು ಸೆಳೆಯಲು ಸಫಲವಾಗುವ ಬಿಜೆಪಿ ಒಟ್ಟು 202 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಗೆಲುವಿನ ನಗೆ ಬೀರಲಿದೆ. 2012ರ ಚುನಾವಣೆಯಲ್ಲಿ 155 ಕ್ಷೇತ್ರಗಳಲ್ಲಿ ಕಮಲ ಅರಳಿತ್ತು.
* ಸಮಾಜವಾದಿ- ಕಾಂಗ್ರೆಸ್ ಮೈತ್ರಿಕೂಟ 147 ಸ್ಥಾನಗಳನ್ನು ಗೆಲ್ಲಲಿದ್ದು 31% ಮತಗಳನ್ನು ಕಬಳಿಸಲು ಯಶಸ್ವಿಯಾಗಲಿದೆ.
*ಮಾಯಾವತಿ ನೇತೃತ್ವದ ಬಿಎಸ್‌ಪಿ ನಿರಾಶಾದಾಯಕ ಫಲಿತಾಂಶವನ್ನು ಪಡೆಯಲಿದ್ದು, 24 ಪ್ರತಿಶತ ಮತಹಂಚಿಕೆಯೊಂದಿಗೆ 80 ಸ್ಥಾನಗಳಿಂದ ಕೇವಲ 47 ಕ್ಷೇತ್ರಕ್ಕೆ ಕುಸಿಯಲಿದೆ.
*ಇತರರು
ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ 11 ಪ್ರತಿಶತ ಮತಹಂಚಿಕೆಯೊಂದಿಗೆ 7 ಸ್ಥಾನಗಳಲ್ಲಿ ಗೆಲ್ಲಲಷ್ಟೇ ಶಕ್ತವಾಗಲಿದೆ.
ಮುಖ್ಯಮಂತ್ರಿ ಯಾರಾಗಬೇಕು?
ಮುಖ್ಯಮಂತ್ರಿ ಯಾರಾಗಬೇಕು ಎಂದು ನಡೆಸಲಾದ ಸಮೀಕ್ಷೆಯಲ್ಲಿ ಬಂದ ಫಲಿತಾಂಶದ ಪ್ರಕಾರ ಅಖಿಲೇಶ್ ಯಾದವ್ ರಾಜ್ಯದಲ್ಲಿ ಅತಿ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಸಮೀಕ್ಷೆಯಲ್ಲಿ ಪಾಲ್ಗೊಂಡ 39% ಜನರು ಅವರಿಗೆ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.
ಮಾಯಾವತಿ (ಶೇ.23), ಬಿಜೆಪಿಯ ಯೋಗಿ ಆದಿತ್ಯಾನಾಥ್(ಶೇ.16), ಮುಲಾಯಂ ಸಿಂಗ್ ಯಾದವ್(ಶೇ.1) ಒಲವು ವ್ಯಕ್ತವಾಗಿದೆ.
ಟೈಮ್ಸ್ ನೌ ವಾಹಿನಿಯ ಸಮೀಕ್ಷೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೆ, ಎಬಿಪಿ ನ್ಯೂಸ್ ಸಮೀಕ್ಷೆಯಲ್ಲಿ ಎಸ್‍ಪಿ, ಕಾಂಗ್ರೆಸ್ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಿ ಬೀಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ