Publish Date: Fri, 27 Oct 2017 (17:53 IST)
Updated Date: Fri, 27 Oct 2017 (17:55 IST)
ಆಂಧ್ರ ಪ್ರದೇಶ: ಬ್ರೇಕ್ ಫೇಲ್ ಆದ ಸಾರಿಗೆ ಬಸ್ ಜನರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯವಾಡದ ಅಜಿತ್‌ಸಿಂಗ್ ನಗರದಲ್ಲಿ ನಡೆದಿದೆ.
ಮೃತರನ್ನು ಮೈಲಾವರಂ ಮೂಲದ ಖುರ್ಷಿದ್ (32), ಅಶ್ರತ್(12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಏಲೂರು ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಹಿನ್ನೆಲೆಯಲ್ಲಿ ಕೋಪಗೊಂಡ ಮೃತರ ಸಂಬಂಧಿಕರು ಬಸ್ ಗೆ ಬೆಂಕಿ ಹಚ್ಚಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ ವಾಂಬೆ ಕಾಲೋನಿಯಿಂದ ಪಂಡಿತ್ ನೆಹರೂ ಬಸ್ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ಬುದಮೇರು ಫ್ಲೈ ಓವರ್ ಬಳಿ ಬಸ್ ಬ್ರೇಕ್ ಫೇಲ್ ಆಗಿದ್ದು, ಬೈಕ್, ಆಟೋರಿಕ್ಷಾ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿಹೊಡೆದಿದೆ. ಕೊನೆಗೆ ಮುಂದಿದ್ದ ಲಾರಿಯೊಂದರ ಚಾಲಕ ಲಾರಿಯನ್ನು ಬಸ್ ಗೆ ಅಡ್ಡ ನಿಲ್ಲಿಸಿದ್ದಾನೆ. ಇದರಿಂದ ಬಸ್ ಮತ್ತಷ್ಟು ಜನರ ಮೇಲೆ ಹರಿದು ಸಂಭವಿಸಬೇಕಾದ ಮತ್ತಷ್ಟು ಅನಾಹುತ ತಪ್ಪಿದೆ.