ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣದ ದುರುಪಯೋಗವಾಗುತ್ತಿದೆ ಎಂದು ಹಲವು ಪುರುಷ ಪರ ಸಂಘಟನೆಗಳು ವಾದಿಸುತ್ತಿರುವುದನ್ನು ನಿಜ ಎನ್ನುವಂತೆ ಮಾಡಿದ್ದಾಳೆ ಈ ಮಹಿಳೆ.
ಇದು ನಡೆದಿರುವುದು ಉತ್ತರ ಪ್ರದೇಶದ ಸಫ್ಜರ್ ಜಂಗ್ ನ ರೂಬಿ ಎಂಬಾಕೆ ಇನ್ನೊಬ್ಬನನ್ನು ಮದುವೆಯಾಗಲು ಪತಿ ತನ್ನನ್ನು ವರದಕ್ಷಿಣೆ ಕಿರುಕುಳ ನೀಡಿ ಸಾಯಿಸಿದ್ದಾನೆಂದು ಸಾಕ್ಷ್ಯ ಸೃಷ್ಟಿಸಿ ಇನ್ನೊಬ್ಬನ ಜತೆ ಮದುವೆಯಾಗಿ ಹಾಯಾಗಿ ಕಾಲ ಕಳೆಯುತ್ತಿದ್ದಳು. ಆದರೆ ಇವರ ನಾಟಕ ಇದೀಗ ಬಯಲಾಗಿದೆ.
ರೂಬಿ ಮತ್ತು ರಾಹುಲ್ ವಿವಾಹ 2016 ರಲ್ಲಿ ನೆರವೇರಿತ್ತು. ಆದರೆ ಇದೇ ವರ್ಷ ಜೂನ್ ನಲ್ಲಿ ರೂಬಿ ತಂದೆ ಹರಿಪ್ರಸಾದ್ ತನ್ನ ಪುತ್ರಿಯನ್ನು ವರದಕ್ಷಿಣೆ ಆಸೆಗಾಗಿ ಅಳಿಯ ಮತ್ತು ಅವರ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದರು.
ಆದರೆ ಸೂಕ್ತ ಸಾಕ್ಷ್ಯ ಸಿಗದ ಕಾರಣ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ರೂಬಿ ತಂದೆ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಕರಣ ಕೈಗೆತ್ತಿಕೊಂಡರು.
ತನಿಖೆ ಸಂದರ್ಭದಲ್ಲಿ ರೂಬಿ ಫೇಸ್ ಬುಕ್ ಖಾತೆ ಆಕ್ಟಿವ್ ಆಗಿರುವುದು ಪೊಲೀಸರಿಗೆ ತಿಳಿಯಿತು. ನಂತರ ಎರಡು ತಿಂಗಳ ಕಾಲ ಆಕೆಯ ಫೇಸ್ ಬುಕ್ ಮತ್ತು ಮೊಬೈಲ್ ಕರೆ ಮೇಲೆ ನಿಗಾವಹಿಸಿದ ಪೊಲೀಸರಿಗೆ ಈಕೆ ದೆಹಲಿಯಲ್ಲಿ ಜೀವಂತವಾಗಿ ಇನ್ನೊಬ್ಬನನ್ನು ಮದುವೆಯಾಗಿ ಕಾಲಕಳೆಯುತ್ತಿರುವ ವಿಚಾರ ತಿಳಿಯಿತು. ಇದೀಗ ಅಪ್ಪ-ಮಗಳು ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.