ಹಿಮಾಚಲಪ್ರದೇಶದಲ್ಲಿ ನಿರ್ಮಾಣಹಂತದಲ್ಲಿರುವ ರೋಹಟಂಗ್ ಸುರಂಗ ಯೋಜನೆಗಾಗಿ ನಿರ್ಮಿಸಿದ್ದ ಪೂರೈಕೆ ಸೇತುವೆಯು ಚಂದ್ರ ನದಿಯ ಪ್ರಬಲವಾದ ನೀರಿನ ಸೆಳೆತಕ್ಕೆ ಸಿಕ್ಕಿ ಕುಸಿದುಬಿದ್ದಿದೆ. ಟ್ರಕ್ಕೊಂದು ಹಾದುಹೋಗುತ್ತಿದ್ದಾಗಲೇ ಸೇತುವೆ ಕುಸಿದಿದ್ದು, ಚಾಲಕನನ್ನು ತಕ್ಷಣವೇ ರಕ್ಷಿಸಲಾಗಿದೆ. ಸಿಸು ಗ್ರಾದಲ್ಲಿ ನಿರ್ಮಿಸುತ್ತಿದ್ದ ಸುರಂಗಕ್ಕೆ ಸೇತುವೆ ಸಂಪರ್ಕ ಕಲ್ಪಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೋಹ್ಟಂಗ್ ಪ್ರಾಜೆಕ್ಟ್ ಬ್ರಿಗೇಡಿಯರ್ ಮುಖ್ಯ ಎಂಜಿನಿಯರ್ ತಿಳಿಸಿದರು.
ಹಳ್ಳಕ್ಕೆ ಬಿದ್ದ ಟ್ರಕ್ಕನ್ನು ಮೇಲಕ್ಕೆತ್ತಿ ಸೇತುವೆಯನ್ನು ನಾಲ್ಕೈದು ದಿನಗಳಲ್ಲಿ ಮರುನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಬಿದ್ದ ಭಾರೀ ಮಳೆ ಮತ್ತು ದಿಢೀರ್ ಪ್ರವಾಹಗಳಿಂದ ಭೂಕುಸಿತಗಳು ಉಂಟಾಗಿದ್ದು, ರಸ್ತೆಗಳಿಗೆ ಅಪಾರ ಹಾನಿಯಾಗಿತ್ತು.
ಲೆಹ್-ಮನಾಲಿ ಹೆದ್ದಾರಿಯಲ್ಲಿ ರೋಹ್ಟಂಗ್ ಕಣಿವೆಯಲ್ಲಿ ನಿರ್ಮಾಣವಾಗುತ್ತಿರುವ 8.8 ಕಿಮೀ ಉದ್ದದ ರೋಹ್ಟಂಗ್ ಸುರಂಗವು ಭಾರತದ ಅತೀ ಉದ್ದದ ಸಂಚಾರ ಸುರಂಗವಾಗಲಿದೆ. ರೋಹ್ಟಂಗ್ ಕಣಿವೆ ಹಿಮಪಾತದಿಂದ 6 ತಿಂಗಳ ಕಾಲ ಮುಚ್ಚಿದರೂ ಸುರಂಗ ವರ್ಷವಿಡೀ ಕಾರ್ಯನಿರ್ವಹಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ