ನವದೆಹಲಿ: ಜಮ್ಮು ಮತ್ತು ಕಾಶ‍್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370 ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಣಯ ಸರಿಯಾ, ತಪ್ಪಾ ಎಂದು ಸುಪ್ರೀಂ ತೀರ್ಪು ನೀಡಲಿದೆ.
ಕಾಶ್ಮೀರಕ್ಕೆ ಪ್ರಥಮ ಪ್ರಧಾನಿ ನೆಹರೂ ಕಾಲದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಅದಾದ ಬಳಿಕ ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು.
ಈ ನಿರ್ಣಯ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದವು. ಅವೆಲ್ಲದರ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ತೀರ್ಪು ನೀಡಲಿದೆ.
ಈ ಸಂಬಂಧ ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಒಂದು ವೇಳೆ ತೀರ್ಪು ಕೇಂದ್ರದ ವಿರುದ್ಧ ಬಂದರೂ ಶಾಂತಿ ಕಾಪಾಡಬೇಕು ಎಂದು ಬಿಜೆಪಿ ಮುಖಂಡ ರವೀಂದ್ರ ರೈನಾ ಹೇಳಿದ್ದಾರೆ. ಅತ್ತ ವಿಧಿ ರದ್ದು ವಿರೋಧಿಸಿ ಹೋರಾಟ ನಡೆಸುತ್ತಿರುವ ಒಮರ್ ಅಬ್ದುಲ್ಲಾ ಕೂಡಾ ಶಾಂತಿಯುತವಾಗಿಯೇ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.