ನವದೆಹಲಿ: ಕನ್ವರ್ ಯಾತ್ರೆಯ ಹಾದಿಯಲ್ಲಿರುವ ಆಹಾರ ಮಳಿಗೆ ಮತ್ತು ಅಂಗಡಿಗಳ ಮಾಲಿಕರು ತಮ್ಮ ಹೆಸರುಗಳನ್ನು ಅಂಗಡಿಯಲ್ಲಿ ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಆಹಾರ ಮಳಿಗೆಗಳಲ್ಲಿ ಮಾಲಿಕರು ತಮ್ಮ ಹೆಸರು ಕಾಣುವಂತೆ ಹಾಕಿಕೊಳ್ಳಬೇಕು ಎಂಬ ಸರ್ಕಾರದ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಂಗಡಿ ಮಾಲಿಕರು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಹೆಸರುಗಳನ್ನು ಅಂಗಡಿಯಲ್ಲಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆದೇಶ ನೀಡಲಾಗಿತ್ತು.
ಆದರೆ ಇದಕ್ಕೆ ಅನ್ಯ ಕೋಮಿನವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇಂತಹದ್ದೊಂದು ಆದೇಶ ಜಾರಿ ಮಾಡಿದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈಗ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಗೆ ಉತ್ತರಿಸಲು ಆದೇಶಿಸಿರುವ ಕೋರ್ಟ್ ಜುಲೈ 26 ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಆಹಾರ ವಸ್ತುಗಳ ಮಾರಾಟಗಾರರಿಗೆ ತಮ್ಮ ಹೆಸರು ಬರೆಯಲು ಒತ್ತಾಯ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಂಗಡಿಗಳಲ್ಲಿ ಮಾಲಿಕರ ಹೆಸರು ಪ್ರದರ್ಶಿಸುವ ಆದೇಶಕ್ಕೆ ತಡೆ ನೀಡಬೇಕೆಂದು ಕೆಲವು ಎನ್ ಜಿಒಗಳು ಮತ್ತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಮುಂತಾದವರು ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.