ನವದೆಹಲಿ:ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರಿಂದ ನಡೆದಿದೆ ಎನ್ನಲಾದ ನಕಲಿ ಎನ್ ಕೌಂಟರ್ ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಣಿಪುರದಲ್ಲಿ 2000ದಿಂದ 2012ರವರೆಗೆ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ 1,528 ಮಂದಿ ಕೈದಿಗಳ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಪರಿಹಾರ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಬಿ.ಲೋಕೂರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಸಿಬಿಐ ನಿರ್ದೇಶಕರಿಗೆ ಆದೇಶ ನೀಡಿ, ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಅಧಿಕಾರಿಗಳ ತಂಡವೊಂದನ್ನು ರಚಿಸುವಂತೆ ಸೂಚಿಸಿದೆ.
ಸೇನಾಪಡೆಗಳ ನಕಲಿ ಎನ್ ಕೌಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಮಣಿಪುರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದೆ. 2018ರ ಜನವರಿಯಲ್ಲಿ ಸಿಬಿಐ ತನ್ನ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದೆ.