ಮುಂಬೈ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ತೆಲುಗು ದೇಶಂ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ 'ಇಂಡಿಯಾ' ಮೈತಿಕೂಟದ ಎಲ್ಲ ಪಕ್ಷಗಳ ಬೆಂಬಲ ಖಚಿತಪಡಿಸಲು ಪ್ರಯತ್ನಿಸಲಿದ್ದೇವೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್, ಲೋಕಸಭಾ ಸ್ಪೀಕರ್ ಆಯ್ಕೆಯು ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿಗೆ ಸ್ಪೀಕರ್ ಸ್ಥಾನ ಸಿಕ್ಕರೆ, ಟಿಡಿಪಿ, ಜೆಡಿಯು, ಚಿರಾಗ್ ಪಾಸ್ವಾನ್ ಹಾಗೂ ಚಯಂತ್ ಚೌಧರಿ ಪಕ್ಷಗಳನ್ನು ಒಡೆಯುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಸ್ಥಿರ ಸರ್ಕಾರ ಇರುವುದಿಲ್ಲ. ತನ್ನನ್ನು ಬೆಂಬಲಿಸುವ ಪಕ್ಷಗಳಿಗೆ ಬಿಜೆಪಿ ದ್ರೋಹ ಬಗೆದಿರುವ ಅನುಭವ ನಮಗಿದೆ ಎಂದು ಅವರು ಹೇಳಿದ್ದಾರೆ. ಟಿಡಿಪಿ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಭಾಗವಾಗಿದೆ.
ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಟಿಡಿಪಿ ಬಯಸುತ್ತಿದೆ ಎಂಬ ವಿಷಯ ನನಗೆ ತಿಳಿದು ಬಂದಿದೆ. ಹಾಗಾದರೆ ಇಂಡಿಯಾ ಮೈತ್ರಿಕೂಟವು ಈ ಕುರಿತು ಚರ್ಚಿಸಿ, ಎಲ್ಲ ಮೈತ್ರಿ ಪಕ್ಷಗಳು ಟಿಡಿಪಿಗೆ ಬೆಂಬಲವನ್ನು ಖಚಿತಪಡಿಸಲು ಪ್ರಯತ್ನಿಸಲಿದ್ದೇವೆ ಎಂದು ಹೇಳಿದ್ದಾರೆ.