ನವದೆಹಲಿ: ರಾಜ್ಯಸಭೆ ಸದಸ್ಯೆಯಾಗಿ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ಅವರು ಕನ್ನಡದಲ್ಲೇ ಪ್ರತಿಜ್ಞಾ ವಿಧಿಯನ್ನು ಓದುವ ಮೂಲಕ ಮೆಚ್ಚುಗೆ ಗಳಿಸಿದರು. ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ರಾಜ್ಯಸಭಾ ನಾಯಕ ಪಿಯೂಷ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು. ಅದಲ್ಲದೆ ಸುಧಾ ಮೂರ್ತಿ ಅವರ ಪತಿ ನಾರಾಯಣ ಮೂರ್ತಿ ಈ ವೇಳೆ ಹಾಜರಿದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನಂತರ ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಎರಡನೇ ಸದಸ್ಯರಾಗಿದ್ದಾರೆ.