ಮಲತಂದೆಯಿಂದ ಲೈಂಗಿಕವಾಗಿ ಆಕ್ರಮಣಕ್ಕೊಳಗಾದ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಘಟನೆ ಬೆಳಕಿಗೆ ಬಂದಿತು. ಮಲಮಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ 45 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ಸೆಷನ್ಸ್ ಕೋರ್ಟ್ 6 ವರ್ಷ ಕಾರಾಗೃಹವಾಸದ ಶಿಕ್ಷೆಯನ್ನು ನೀಡಿದೆ.
ಪೀಡಿತಳ ತಂದೆಯ ಮರಣಾ ನಂತರ, ಆಕೆಯ ತಾಯಿ ಆರೋಪಿಯ ಜತೆ ಮರು ವಿವಾಹವಾದ ನಂತರ ಕುಟುಂಬ ಪಶ್ಚಿಮ ಮುಂಬೈನ ಮಾಹಿಮ್‌ಗೆ ವಾಸ್ತವ್ಯ ಬದಲಿಸಿತು. ನಂತರ ಆರೋಪಿ ಈ ಕೃತ್ಯವನ್ನೆಸಗಿದ್ದಾನೆ .
ಘಟನೆಯನ್ನು ತಾಯಿಯ ಬಳಿ ಹೇಳಿಕೊಂಡಾಗ ಆಕೆ ಗಂಡನ ಬಳಿ ಈ ಕುರಿತು ಜಗಳವಾಡಿದ್ದಳು. ಆದರು ಕೂಡ ಹುಡುಗಿಗೆ ಲೈಂಗಿಕ ಹಿಂಸೆ ನೀಡುವುದನ್ನಾತ ಮುಂದುವರೆಸಿದ್ದ. ಹುಡುಗಿಯ ತಾಯಿ ಕ್ಷಯರೋಗ ಪೀಡಿತಳಾಗಿ ಫೆಬ್ರವರಿ ತಿಂಗಳಲ್ಲಿ ಮರಣವನ್ನಪ್ಪಿದ ನಂತರ ಆತ ತನ್ನ ದುಷ್ಕೃತ್ಯವನ್ನು ಮುಂದುವರೆಸಿದ್ದ.
ಈ ವಿಷಯ ಪೀಡಿತಳ ತಾಯಿಯ ಸಹೋದರಿಯ ಗಮನಕ್ಕೆ ಬಂದಾಗ ಆಕೆ ಪೋಲಿಸರಲ್ಲಿ ದೂರು ದಾಖಲಿಸಿದಳು. ಆರೋಪಿಯ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಹಿತರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಯಿತು.
ವಿಚಾರಣೆ ಸಂದರ್ಭದಲ್ಲಿ ಹಲವಾರು ಸಾಕ್ಷಿಗಳನ್ನು ಪರೀಕ್ಷಿಸಿದ ನ್ಯಾಯಾಧೀಶರು ಆರೋಪಿಗೆ 6 ವರ್ಷಗಳ ಸಜೆಯನ್ನು ವಿಧಿಸಿದರು.