ಮಹಾತ್ಮಾ ಗಾಂಧಿಯವರ ರಾಜ್ಯದಲ್ಲಿ ಸತ್ಯ ಮತ್ತು ಸಿದ್ಧಾಂತಕ್ಕಾಗಿ ತಮ್ಮ ಹೋರಾಟವನ್ನು ಮುಂದುವರಿಸಲು ಒಗ್ಗಟ್ಟಾಗಿರುವಂತೆ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕೋರಿದ್ದಾರೆ.
ಗುಜರಾತ್‌ನಲ್ಲಿ ಪ್ರಸಕ್ತ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆ ರಣತಂತ್ರ ಕುರಿತಂತೆ ಕಾಂಗ್ರೆಸ್ ಶಾಸಕರೊಂದಿಗೆ ಹೈಕಮಾಂಡ್ ಚರ್ಚೆ ನಡೆಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಜರಾತ್ ಉಸ್ತುವಾರಿ ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ಪ್ರಮುಖ ರಣತಂತ್ರಜ್ಞ ಅಹ್ಮದ್ ಪಟೇಲ್ ಅವರು ಭಾಗವಹಿಸಿದ್ದರು.
ಗುಜರಾತ್ ಕಾಂಗ್ರೆಸ್ ಶಾಸಕರು ಮತ್ತು ಅಲ್ಲಿನ ನಾಯಕರೊಂದಿಗೆ ನಡೆದ ಸಭೆ ಉತ್ತಮವಾಗಿತ್ತು ಎಂದು ಸಭೆಯ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಣಬಲ, ಅಧಿಕಾರ ಬಲ ತೋಳ್ಬಲದಿಂದ ಹೆದರಿ, ಬೆದರಿಸಿದ ನಂತರವೂ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಪಕ್ಷಕ್ಕೆ ತೋರಿದ ನಿಷ್ಠೆ ಸಂತಸ ತಂದಿದೆ. "ಸತ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ನಿಮ್ಮನ್ನು ಅಭಿನಂಧಿಸುತ್ತೇನೆ ಎಂದು ಸೋನಿಯಾ, ರಾಹುಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಗುಜರಾತ್‌ನಲ್ಲಿ ಮಹಾತ್ಮಾ ಗಾಂಧಿಯವರ ತತ್ವಗಳನ್ನು ಪುನರ್‌ಸ್ಥಾಪಿಸಲು ಸ್ಪರ್ಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್‌ನಲ್ಲಿ, ಕಾಂಗ್ರೆಸ್ ಪಕ್ಷ ಸುಮಾರು 20 ವರ್ಷಗಳ ನಂತರ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.