Publish Date: Fri, 24 Jul 2026 (09:17 IST)
Updated Date: Fri, 24 Jul 2026 (09:23 IST)
ನೀಟ್ ಪೇಪರ್ ಸೋರಿಕೆ ಪ್ರಕರಣ ಖಂಡಿಸಿ ಮತ್ತು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರಬೇಕೆಂದು ಆಗ್ರಹಿಸಿ ಕಳೆದೆರಡು ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿದ್ದ ಪ್ರಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ ಪ್ರೇಮಿ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.
ಕೇಂದ್ರ ಸರ್ಕಾರದ ಲಿಖಿತ ಭರವಸೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಸದರ ಮನವಿಯ ನಂತರ ಅವರು ತಮ್ಮ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ಸಾಮಾಜಿಕ ಜಾಲತಾಣ 'X' ನಲ್ಲಿ ವಾಂಗ್ಚುಕ್ ಸಂದೇಶ
ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸೋನಮ್ ವಾಂಗ್ಚುಕ್, "END OF HUNGER... BEGINNING OF ACCOUNTABILITY...!" (ಉಪವಾಸದ ಅಂತ್ಯ... ಹೊಣೆಗಾರಿಕೆಯ ಆರಂಭ!) ಎಂದು ಭಾವನಾತ್ಮಕವಾಗಿ ಘೋಷಿಸಿದ್ದಾರೆ.
"ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಸಂಸದರು ಭಾರತೀಯ ಸಂಸತ್ತಿನ ಅಧಿವೇಶನದಲ್ಲಿ ಪರೀಕ್ಷಾ ವ್ಯವಸ್ಥೆಯ ಹೊಣೆಗಾರಿಕೆ ಕುರಿತು ಸುದೀರ್ಘ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಲಾಗಿದೆ."
ಸಚಿವರ ಸಮ್ಮುಖದಲ್ಲಿ ಉಪವಾಸ ಅಂತ್ಯ
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಮ್ ವಾಂಗ್ಚುಕ್ ಅವರ ಬಳಿಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿಪೇಂದ್ರ ಸಿಂಗ್ ಭೇಟಿ ನೀಡಿ ಮಾತುಕತೆ ನಡೆಸಿದರು. ಸರ್ಕಾರದ ಕಡೆಯಿಂದ ಸ್ಪಷ್ಟ ಹಾಗೂ ಲಿಖಿತ ಆಶ್ವಾಸನೆ ದೊರೆತ ನಂತರ, ಸಚಿವರ ಸಮ್ಮುಖದಲ್ಲಿ ಹಣ್ಣಿನ ರಸ ಕುಡಿಯುವ ಮೂಲಕ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದರು.
ಪ್ರತಿಭಟನಾ ನಿರತರ ರಕ್ಷಣೆ: ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಜನರ ಮೇಲೆ ಯಾವುದೇ ರೀತಿಯ ಪೊಲೀಸ್ ಕೇಸುಗಳನ್ನು ಜಡಿಯುವುದಿಲ್ಲ ಎಂಬ ಸರ್ಕಾರದ ಭರವಸೆಯನ್ನು ವಾಂಗ್ಚುಕ್ ಪ್ರಮುಖ ಗೆಲುವು ಎಂದು ಬಣ್ಣಿಸಿದ್ದಾರೆ.
ವಿದ್ಯಾರ್ಥಿ ಕುಟುಂಬಗಳಿಗೆ ನೆರವು: ನೀಟ್ ಪೇಪರ್ ಸೋರಿಕೆಯ ಆಘಾತದಿಂದ ಕಂಗಾಲಾಗಿ ಜೀವ ಕಳೆದುಕೊಂಡ ಅಮಾಯಕ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ನೀಡುವುದಾಗಿ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮತ್ತು ಕ್ಯಾಬಿನೆಟ್‌ನಲ್ಲಿ ಕಠಿಣ ಮಸೂದೆ ತರುವುದಾಗಿ ಭರವಸೆ ನೀಡಿದ್ದನ್ನೂ ಈ ಸಂದರ್ಭದಲ್ಲಿ ಸ್ಮರಿಸಬಹುದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ